ಮೈದಾನದಲ್ಲೇ ರಿಂಕು ಸಿಂಗ್​ ಕೆನ್ನೆಗೆ ಬಾರಿಸಿದ್ದೇಕೆ ಕುಲದೀಪ್? ಆತನನ್ನು ಬ್ಯಾನ್​ ಮಾಡಿ ಎಂದು ಆಕ್ರೋಶ! Kuldeep Yadav

Kuldeep Yadav
Published on

Kuldeep Yadav : ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ಕುಲದೀಪ್​ ಅವರನ್ನು ನಿಷೇಧಿಸುವಂತೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡುತ್ತಿದ್ದಾರೆ.

ಕುಲದೀಪ್ ಯಾದವ್ ಪ್ರಸಕ್ತ ಐಪಿಎಲ್ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇಲ್ಲಿಯವರೆಗೆ ಹತ್ತು ಪಂದ್ಯಗಳನ್ನು ಪೂರ್ಣಗೊಳಿಸಿರುವ ಯಾದವ್​, 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕುಲದೀಪ್ ಅವರ​ ಪ್ರದರ್ಶನ ಉತ್ತಮವಾಗಿದ್ದರೂ ಮಂಗಳವಾರ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಅವರ ವರ್ತನೆ ಭಾರೀ ಟೀಕೆಗೆ ಕಾರಣವಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಆತಿಥೇಯ ತಂಡ ಕೆಕೆಆರ್ ಅನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅಜಿಂಕ್ಯಾ ರಹಾನೆ ನೇತೃತ್ವದ ಕೆಕೆಆರ್​ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಕೊನೆಯವರೆಗೂ ಹೋರಾಡಿ ಹದಿನಾಲ್ಕು ರನ್‌ಗಳಿಂದ ಸೋತಿತು. ಪಂದ್ಯದ ನಂತರ, ಎರಡೂ ತಂಡಗಳ ಆಟಗಾರರು ಸಂಪ್ರದಾಯದಂತೆ ಕೈಕುಲುಕಿದರು ಮತ್ತು ಅವರಲ್ಲಿ ಕೆಲವರು ಪ್ರತ್ಯೇಕವಾಗಿ ಮಾತನಾಡಿದರು.

ಕುಲದೀಪ್ ಯಾದವ್ (ದೆಹಲಿ) ಮತ್ತು ರಿಂಕು ಸಿಂಗ್ (ಕೆಕೆಆರ್) ಮೋಜಿನ ಸಂಭಾಷಣೆ ನಡೆಸಿದರು. ಇಬ್ಬರೂ ಹಾಸ್ಯದ ಮಾತುಗಳನ್ನಾಡುತ್ತಾ ನಗುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಕುಲದೀಪ್ ಅವರು ರಿಂಕು ಅವರ ಕೆನ್ನೆಗೆ ಬಾರಿಸಿದರು. ಇದರಿಂದ ರಿಂಕು ಸ್ವಲ್ಪ ಆಶ್ಚರ್ಯಚಕಿತರಾದರು. ಆದರೆ, ಕುಲದೀಪ್ ಮತ್ತೆ ಕಪಾಳಕ್ಕೆ ಹೊಡೆದಾಗ ರಿಂಕು ಮುಖ ಬದಲಾಯಿತು. ಕುಲದೀಪ್ ಅವರ ವರ್ತನೆಯಿಂದ ರಿಂಕು ಬೇಸರಗೊಂಡಂತೆ ಅವರ ಮುಖಭಾವ ತೋರಿಸಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್​ ಆಗಿದೆ.

ಕುಲದೀಪ್ ಯಾದವ್ ಅವರ ಈ ನಡವಳಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಹ ಆಟಗಾರನೊಂದಿಗೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ. ಇಂಥವರನ್ನು ಸುಮ್ಮನೇ ಬಿಡುಬಾರದು, ಬ್ಯಾನ್​ ಮಾಡಿ ಎಂದು ಆಗ್ರಹಿಸಿ, ಬಿಸಿಸಿಐಗೆ ಟ್ಯಾಗ್ ಮಾಡುತ್ತಿದ್ದಾರೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ಆಡದಂತೆ ನಿಷೇಧಿಸಿದರೆ ಮಾತ್ರ ಇಂಥವರು ದಾರಿಗೆ ಬರುತ್ತಾರೆ ಎಂದು ಬಿಸಿಸಿಐಗೆ ಸಲಹೆ ನೀಡುತ್ತಿದ್ದಾರೆ.

ಅಂದಹಾಗೆ, ಈ ಪಂದ್ಯದಲ್ಲಿ ಕುಲದೀಪ್ ಯಾದವ್ ತಮ್ಮ ಮೂರು ಓವರ್‌ಗಳಲ್ಲಿ 27 ರನ್‌ಗಳನ್ನು ಬಿಟ್ಟುಕೊಟ್ಟು ಯಾವುದೇ ವಿಕೆಟ್ ಪಡೆಯಲಿಲ್ಲ. ಮತ್ತೊಂದೆಡೆ, ಕೆಕೆಆರ್ ಪರ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಿಂಕು 25 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net