

IPL 2025 Auction : ಇಂಡಿಯನ್ ಪ್ರೀಮಿಯರ್ ಲೀಗ್- 2025 ಮೆಗಾ ಹರಾಜಿನ ಸಮಯ ಹತ್ತಿರ ಬಂದಿದೆ. ಇನ್ನು ನಾಲ್ಕು ದಿನಗಳಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. 1574 ಆಟಗಾರರು ಹರಾಜಿಗೆ ತಮ್ಮ ಹೆಸರು ನೋಂದಾಯಿಸಿದ್ದರೆ, ಫ್ರಾಂಚೈಸಿಗಳ ಸೂಚನೆಯಂತೆ ಬಿಸಿಸಿಐ ಕೇವಲ 574 ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಿದೆ. ಹರಾಜಿನಲ್ಲಿ 204 ಆಟಗಾರರನ್ನು ಖರೀದಿಸಲು ಹತ್ತು ಫ್ರಾಂಚೈಸಿಗಳು ಸಜ್ಜಾಗಿವೆ. ಯಾರಿಗೆ ಅದೃಷ್ಟ ಒಲಿದು ಬರುತ್ತೆ ಕಾದು ನೋಡೋಣ.
ಟೀಮ್ ಇಂಡಿಯಾದ ಕೆ.ಎಲ್. ರಾಹುಲ್, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಹರಾಜಿನಲ್ಲಿ ವಿಶೇಷ ಆಕರ್ಷಣೆಯಾಗಿದ್ದಾರೆ. ಅವರ ಮೇಲೆ ಕೋಟಿ ಕೋಟಿ ಹಣ ಮಳೆಯಾಗುವ ಸಂಭವವಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ( CSK ) ಫ್ರಾಂಚೈಸಿಗಳು ವಿಶೇಷವಾಗಿ ಕೆ.ಎಲ್.ರಾಹುಲ್ಗೆ ಪೈಪೋಟಿ ನಡೆಸಲಿವೆ ಎಂದು ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ಈ ಎರಡೂ ತಂಡಗಳಿಗೆ ಕೀಪರ್ ಬೇಕಾಗಿರುವುದರಿಂದ ರಾಹುಲ್ಗೆ ಪೈಪೋಟಿ ನೀಡಲಿವೆ ಎಂದು ಗವಾಸ್ಕರ್ ಅವರು ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
ದಕ್ಷಿಣದ ಎರಡು ಫ್ರಾಂಚೈಸಿಗಳಾದ ಬೆಂಗಳೂರು ಮತ್ತು ಚೆನ್ನೈ ಕೆ.ಎಲ್. ರಾಹುಲ್ಗೆ ಪೈಪೋಟಿ ನಡೆಸಲಿವೆ. ಬಹುಶಃ ಹೈದರಾಬಾದ್ ಕೂಡ ಸ್ಪರ್ಧಿಸಬಹುದು. ಬೆಂಗಳೂರು ರಾಹುಲ್ ಅವರ ತವರೂರು ಆಗಿರುವುದರಿಂದ ಅವರು RCB ಗೆ ಸೇರಲು ಉತ್ಸುಕರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬ ಆಟಗಾರನೂ ತನ್ನ ಅಭಿಮಾನಿಗಳ ಮುಂದೆ ಆಡಲು ಬಯಸುತ್ತಾನೆ. ರಾಹುಲ್ಗಾಗಿ ಬೆಂಗಳೂರು ಕಠಿಣ ಪ್ರಯತ್ನ ನಡೆಸಲಿದೆ ಎಂದು ಗವಾಸ್ಕರ್ ಹೇಳಿದರು.
ಐಪಿಎಲ್-2025 ಮೆಗಾ ಹರಾಜಿಗೂ ಮುನ್ನ ಬಿಡುಗಡೆಯಾದ ರಿಟೇನ್ ಪಟ್ಟಿಯಲ್ಲಿ ಲಖನೌ ಸೂಪರ್ಜೈಂಟ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಕೈಬಿಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಎಲ್ಲರ ಮುಂದೆಯೇ ರಾಹುಲ್ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ ನಂತರ ರಾಹುಲ್ ಅಸಮಾಧಾನದಿಂದ ಹೊರನಡೆದಿದ್ದಾರೆ ಎಂದು ಹೇಳಲಾಗಿದೆ.
ಆರ್ಸಿಬಿ ಜೊತೆಗೆ ಸಿಎಸ್ಕೆ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ರಾಹುಲ್ಗಾಗಿ ಪ್ರಯತ್ನಿಸುವ ಸಾಧ್ಯತೆಯಿದೆ. ಪಂಜಾಬ್, ದೆಹಲಿ ಮತ್ತು ಆರ್ಸಿಬಿ ತಂಡಗಳಿಗೆ ಈಗ ನಾಯಕನ ಅಗತ್ಯವಿದೆ. ರಾಹುಲ್ ಯಾವ ಫ್ರಾಂಚೈಸಿ ಸೇರಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)