

IND vs NZ Final: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿರುವ ರೋಹಿತ್ ಶರ್ಮ ಪಡೆ, ತಮ್ಮ ಐದನೇ ಹಾಗೂ ಕೊನೆಯ ಪಂದ್ಯವನ್ನು ಕಿವೀಸ್ ವಿರುದ್ಧ ಆಡಲಿದೆ. ಈ ಪಂದ್ಯವೂ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತದ ಗೆಲುವಿಗೆ ಪಿಚ್ ಕಂಡೀಷನ್ ಹೇಗೆ ಫಲಿಸಲಿದೆ? ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಈ ಮಧ್ಯೆ ನ್ಯೂಜಿಲೆಂಡ್ ಕ್ಯಾಪ್ಟನ್ ಹೇಳಿಕೆ ಹಲವರ ಹುಬ್ಬೇರಿಸಿದೆ.
ಭಾನುವಾರ (ಮಾ.09) ನಡೆಯಲಿರುವ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಫೈನಲ್ ಪಂದ್ಯಕ್ಕೆ ಉಭಯ ತಂಡಗಳು ಸಕಲ ತಯಾರಿ ನಡೆಸುತ್ತಿದ್ದು, ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಲು ರೋಹಿತ್ ಶರ್ಮ ಪಡೆ ಎದುರುನೋಡುತ್ತಿದ್ದರೆ, ದುಬೈ ಪಿಚ್ನಲ್ಲೇ ಆಡುತ್ತಿರುವ ಟೀಮ್ ಇಂಡಿಯಾಗೆ ಈ ಪಂದ್ಯದಲ್ಲಿಯೂ ಗೆಲುವು ಸಿಗಬಹುದೇ ಎಂಬ ಚಿಂತೆ ಕಿವೀಸ್ ಕ್ಯಾಪ್ಟನ್ಗೆ ಕಾಡುತ್ತಿದೆ. ಅದಕ್ಕೆ ಅವರ ಇತ್ತೀಚಿನ ಹೇಳಿಕೆಯೇ ಕಾರಣ.
ದುಬೈಗೆ ಬಂದಿಳಿದ ಹಿನ್ನೆಲೆ ಮಾತನಾಡಿದ ಮಿಚೆಲ್ ಸ್ಯಾಟ್ನರ್, "ತಮ್ಮೆಲ್ಲ ಪಂದ್ಯಗಳನ್ನು ಭಾರತ ಇದೇ ಪಿಚ್ನಲ್ಲಿ ಆಡಿದೆ. ಹಾಗಾಗಿ, ಅವರಿಗೆ ದುಬೈ ಪಿಚ್ ಹೇಗಿರಲಿದೆ ಎಂಬ ಐಡಿಯಾ ಇದೆ. ಲಾಹೋರ್ ಕ್ರೀಡಾಂಗಣದಲ್ಲಿ ಆಡಿರುವ ನಮಗೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದೇ ಕುತೂಹಲ. ಖಂಡಿತ, ಕೊಂಚ ಕಷ್ಟವಾಗಲಿದೆ. ಆದ್ರೆ, ಅದನ್ನು ಭೇದಿಸುವ ಕಲೆ ನಮಗಿದೆ. ಇದೊಂದು ಸವಾಲು ಎಂದೇ ನಾವು ಸ್ವೀಕರಿಸುತ್ತೇವೆ. ಟೂರ್ನಿಯಲ್ಲಿ ಬಹುತೇಕ ಎಲ್ಲ ಪಿಚ್ಗಳಲ್ಲಿಯೂ ನಮ್ಮ ತಂಡ ಆಡಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).