ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ರದ್ದು

india srilanka
Published on

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಭಾರತ ತಂಡದ ಮುಂಬರುವ ಶ್ರೀಲಂಕಾ ಪ್ರವಾಸ ರದ್ದುಗೊಂಡಿದೆ. ಹಾಲಿ ಪರಿಸ್ಥಿತಿ ಕ್ರಿಕೆಟ್ ಆಡಲು ಸೂಕ್ತವಾಗಿರದ ಕಾರಣ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಈ ನಿರ್ಧಾರ ಕೈಗೊಂಡಿವೆ. ಕಳೆದ ಮಾರ್ಚ್‌ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ರದ್ದುಗೊಂಡ ಬಳಿಕ, ಕರೊನಾ ಹಾವಳಿಗೆ ಬಲಿಯಾದ ಭಾರತ ತಂಡದ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ.

ಜೂನ್-ಜುಲೈನಲ್ಲಿ ನಿಗದಿಯಾಗಿದ್ದ ಪ್ರವಾಸದಲ್ಲಿ ಭಾರತ ತಂಡ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಬೇಕಾಗಿತ್ತು. ಸರಣಿಯ ಪಂದ್ಯಗಳ ದಿನಾಂಕ ಇನ್ನೂ ಅಂತಿಮಗೊಂಡಿರಲಿಲ್ಲ. ಭಾರತ ತಂಡದ ಪ್ರವಾಸ ರದ್ದಾಗಿರುವುದನ್ನು ಲಂಕಾ ಕ್ರಿಕೆಟ್ ಮಂಡಳಿಯ ಪ್ರಕಟಣೆ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ‘ಜೂನ್-ಜುಲೈನಲ್ಲಿ ಲಂಕಾ ಪ್ರವಾಸ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಲಂಕಾ ಮಂಡಳಿಗೆ ಇದನ್ನು ತಿಳಿಸಿದ್ದೇವೆ. ಆದರೆ ಈ ಸರಣಿಯನ್ನು ಮುಂದಿನ ದಿನಗಳಲ್ಲಿ ಆಡಲು ಬದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ಲಂಕಾ ಪ್ರವಾಸ ರದ್ದುಗೊಂಡಿರುವುದರಿಂದ ಭಾರತ ತಂಡದ ಆಟಗಾರರ ಅಭ್ಯಾಸ ಪುನರಾರಂಭ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ. ದೇಶದಲ್ಲಿ ಕರೊನಾ ಪ್ರಕರಣಗಳು ಸದ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ, ಬಿಸಿಸಿಐ ಆಟಗಾರರನ್ನು ಇನ್ನಷ್ಟು ದಿನ ಅಭ್ಯಾಸದಿಂದ ದೂರವಿಡಬಹುದು. ಭಾರತ ತಂಡದ ಆಟಗಾರರು ಮ್ಯಾಚ್ ಫಿಟ್ನೆಸ್ ಕಾಣಲು ಕನಿಷ್ಠ 6 ವಾರಗಳ ಅಭ್ಯಾಸ ಅಗತ್ಯವೆನಿಸಿದೆ.

ಭಾರತದಲ್ಲಿ ಈಗ ಕರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದ್ದು, ಸಾವಿರ ಸಂಖ್ಯೆಯೂ 8 ಸಾವಿರ ದಾಟಿದೆ. ಅತ್ತ ಲಂಕಾದಲ್ಲೂ ಸದ್ಯ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಪರಿಸ್ಥಿತಿ ಸುಧಾರಿಸಿದರೆ ಆಗಸ್ಟ್ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net