More

    ಮಹಿಳಾ ಕ್ರಿಕೆಟ್​ನಲ್ಲಿ ಚೆಂಡು ಸಣ್ಣದಾಗಬೇಕು ಎಂದಿದ್ದೇಕೆ ಸೋಫಿ ಡಿವೈನ್?

    ನವದೆಹಲಿ: ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈಗ ಮಹಿಳಾ ಕ್ರಿಕೆಟ್ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದೆ. 2017ರ ಏಕದಿನ ವಿಶ್ವಕಪ್ ಮತ್ತು ಈ ವರ್ಷದ ಟಿ20 ವಿಶ್ವಕಪ್ ಯಶಸ್ಸಿನ ಬಳಿಕ ಮಹಿಳಾ ಕ್ರಿಕೆಟ್ ಕೂಡ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಮಹಿಳಾ ಕ್ರಿಕೆಟ್ ಇನ್ನಷ್ಟು ಆಕರ್ಷಣೆ ಪಡೆದುಕೊಳ್ಳಬೇಕಾದರೆ ಆಗಬೇಕಾಗಿರುವ ಕ್ರಾಂತಿಕಾರಿ ಬದಲಾವಣೆಗಳ ಬಗ್ಗೆ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್, ಭಾರತದ ಬ್ಯಾಟುಗಾರ್ತಿ ಜೆಮೀಮಾ ರೋಡ್ರಿಗಸ್ ಜತೆಗಿನ ಆನ್‌ಲೈನ್ ಸಂವಾದದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಮುಂದುವರಿದ ವಿಶ್ವಕಪ್ ಅನಿಶ್ಚಿತತೆ: ಇನ್ನೊಂದು ತಿಂಗಳು ಕಾದುನೋಡಲಿದೆ ಐಸಿಸಿ

    ಮಹಿಳಾ ಕ್ರಿಕೆಟ್‌ನಲ್ಲಿ ಬಳಸುವ ಚೆಂಡಿನ ಅಳತೆ ಸಣ್ಣದಾಗಬೇಕು, ಪಿಚ್‌ಗಳು ಕಿರಿದಾಗಬೇಕು, ಸೂಪರ್-ಸಬ್‌ಗಳ ಬಳಕೆಯಾಗಬೇಕು ಎಂದು ಡಿವೈನ್ ಹೇಳಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಡಿವೈನ್ ಸರ್ವಾಧಿಕ ರನ್‌ಸ್ಕೋರರ್ ಎನಿಸಿದ್ದರು. ‘ನಾವು ಸಾಂಪ್ರದಾಯಕ ಮಾದರಿಗೆ ಅಂಟಿಕೊಂಡಿದ್ದೇವೆ. ಇದರಿಂದಾಗಿ ಸಾಕಷ್ಟು ಹೊಸ ಆಟಗಾರ್ತಿಯರು ಕ್ರಿಕೆಟ್‌ನತ್ತ ಬರುವುದನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಮಹಿಳಾ ಕ್ರಿಕೆಟ್‌ನಲ್ಲಿ ಬಳಸಲಾಗುವ ಚೆಂಡು ಸಣ್ಣ ಮತ್ತು ಹಗುರವಾಗಬೇಕೆಂಬುದು ನನ್ನ ವಾದ. ಪಿಚ್ ಅಳತೆಯೂ ಪುರುಷರ ಕ್ರಿಕೆಟ್‌ಗಿಂತ ಕಿರಿದಾಗಬೇಕು. ಇದರಿಂದ ವೇಗದ ಬೌಲರ್‌ಗಳು ಇನ್ನಷ್ಟು ವೇಗವಾಗಿ ಚೆಂಡೆಯಲು ಸಾಧ್ಯವಾಗುತ್ತದೆ. ಸ್ಪಿನ್ನರ್‌ಗಳೂ ಹೆಚ್ಚಿನ ತಿರುವು ಕಾಣಬಹುದಾಗಿದೆ. ವೇಗವಾಗಿ ಚೆಂಡು ಬಂದರೆ ಅದು ಇನ್ನಷ್ಟು ದೂರಕ್ಕೆ ಹಾರಿಹೋಗುವ ಸಾಧ್ಯತೆ ಇರುತ್ತದೆ’ ಎಂದು ಆಲ್ರೌಂಡರ್ ಸೋಫಿ ಡಿವೈನ್ ವಿವರಿಸಿದ್ದಾರೆ.

    ಇದನ್ನೂ ಓದಿ: ಚೆಂಡಿಗೆ ಎಂಜಲು ಹಚ್ಚಿದ್ರೆ 5 ರನ್ ದಂಡ!

    ಮಹಿಳಾ ಕ್ರಿಕೆಟ್‌ನಲ್ಲಿ ಬಳಸಲಾಗುವ ಚೆಂಡು ಈಗಾಗಲೆ ಪುರುಷರ ಕ್ರಿಕೆಟ್‌ಗಿಂತ ಸ್ವಲ್ಪ ಮಟ್ಟಿಗೆ ಸಣ್ಣದಾಗಿದೆ ಮತ್ತು ಹಗುರವಾಗಿದೆ. ಪುರುಷರ ಕ್ರಿಕೆಟ್‌ನಲ್ಲಿ 155.9-163 ಗ್ರಾಂ ಭಾರ ಮತ್ತು 22.4-22.9 ಸೆಂಟಿಮೀಟರ್ ಅಳತೆಯ ಚೆಂಡು ಬಳಸಲಾಗುತ್ತಿದ್ದರೆ, ಮಹಿಳಾ ಕ್ರಿಕೆಟ್‌ನಲ್ಲಿ 140-151 ಗ್ರಾಂ ಭಾರ ಮತ್ತು 21.0-22.5 ಸೆಂಟಿಮೀಟರ್ ಅಳತೆಯ ಚೆಂಡು ಬಳಸಲಾಗುತ್ತಿದೆ. ಆದರೆ ಪಿಚ್ ಮಾತ್ರ ಎರಡೂ ಕಡೆಯಲ್ಲೂ 22 ಯಾರ್ಡ್ ಅಳತೆಯನ್ನೇ ಹೊಂದಿರುತ್ತದೆ. ಸಣ್ಣ ಮತ್ತು ಹಗುರ ಚೆಂಡಿನ ಬಳಕೆಯಿಂದ ಮಹಿಳಾ ಕ್ರಿಕೆಟ್ ಇನ್ನಷ್ಟು ಆಕ್ರಮಣಕಾರಿಯಾಗುತ್ತದೆ ಎಂಬುದು 30 ವರ್ಷದ ಸೋಫಿ ಡಿವೈನ್ ಅವರ ಅಭಿಪ್ರಾಯವಾಗಿದೆ.

    ಇದನ್ನೂ ಓದಿ: 2020ರಲ್ಲಿ ಇನ್ನು ಫೆಡರರ್ ಆಡಲ್ಲ!

    ಸೋಫಿ ಡಿವೈನ್ ಅಭಿಪ್ರಾಯಕ್ಕೆ ಸ್ವಲ್ಪ ವ್ಯತಿರಿಕ್ತ ಅಭಿಪ್ರಾಯ ಹಂಚಿಕೊಂಡಿರುವ ಮಂಗಳೂರು ಮೂಲದ ಮುಂಬೈ ಆಟಗಾರ್ತಿ ಜೆಮೀಮಾ ರೋಡ್ರಿಗಸ್, ‘ಪುರುಷರ ಮತ್ತು ಮಹಿಳಾ ಕ್ರಿಕೆಟ್ ನಡುವೆ ನಾನು ಹೋಲಿಕೆ ಮಾಡಲಾರೆ. ನಮ್ಮಿಬ್ಬರ ಆಟದ ನಡುವೆ ಸಣ್ಣ ವ್ಯತ್ಯಾಸ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಸಣ್ಣ ಪಿಚ್ ಸಿದ್ಧಪಡಿಸುವ ಅಭಿಪ್ರಾಯವನ್ನು ನಾನೂ ಒಪ್ಪಿಕೊಳ್ಳುವೆ. ಆಟವನ್ನು ಸುಧಾರಿಸಲು ಅದು ನೆರವಾಗುವುದಾದರೆ ಖಂಡಿತವಾಗಿಯೂ ಮಾಡಬಹುದು ಮತ್ತು ಆಟವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು’ ಎಂದಿದ್ದಾರೆ. 2022ರ ಬರ್ಮಿಂಗ್‌ಹ್ಯಾಂ ಕಾಮನ್ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ಸೇರ್ಪಡೆಗೊಳಿಸಲಾಗಿದ್ದು, ಅದರಲ್ಲಿ ಪದಕ ಜಯಿಸುವತ್ತ ಗಮನ ಹರಿಸುವೆ ಎಂದು 19 ವರ್ಷದ ಜೆಮೀಮಾ ಹೇಳಿದ್ದಾರೆ.

    ನನ್ನನ್ನು ಚೈನೀಸ್ ಎನ್ನುತ್ತಾರೆ, ಜ್ವಾಲಾ ಗುಟ್ಟಾ ಜನಾಂಗೀಯ ನಿಂದನೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts