ಮುಂದುವರಿದ ವಿಶ್ವಕಪ್ ಅನಿಶ್ಚಿತತೆ: ಇನ್ನೊಂದು ತಿಂಗಳು ಕಾದುನೋಡಲಿದೆ ಐಸಿಸಿ

T20 Worldcup
Published on

ದುಬೈ: ಅಕ್ಟೋಬರ್-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯದ ಬಗ್ಗೆ ಇನ್ನೊಂದು ತಿಂಗಳು ಗೊಂದಲ ಮುಂದುವರಿಯಲಿದೆ. ಬುಧವಾರ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಮಹತ್ವದ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಟೂರ್ನಿ ಬಗೆಗಿನ ನಿರ್ಧಾರವನ್ನು ಐಸಿಸಿ ಜುಲೈವರೆಗೆ ಮುಂದೂಡಿದೆ.

‘ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯ ನಿರ್ಧರಿಸಲು ನಮಗೆ ಒಂದು ಅವಕಾಶ ಮಾತ್ರ ಸಿಗಲಿದೆ ಮತ್ತು ಅದು ಸರಿಯಾದ ನಿರ್ಧಾರವಾಗಿರಬೇಕೆಂದು ಬಯಸಿದ್ದೇವೆ. ಹೀಗಾಗಿ ನಾವು ಟೂರ್ನಿಗೆ ಸಂಬಂಧಿಸಿದ ಎಲ್ಲರ ಜತೆಗೆ ಇನ್ನೊಂದು ತಿಂಗಳು ಕಾದು ನೋಡಲು ನಿರ್ಧರಿಸಿದ್ದೇವೆ’ ಎಂದು ಐಸಿಸಿ ಸಿಇಒ ಮನು ಸಾವ್ನೆ ಸಭೆಯ ಬಳಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ 3 ಗಂಟೆಗಳ ಸುದೀರ್ಘ ಸಭೆ ನಡೆದರೂ, ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿಲ್ಲ. ವಿಶ್ವಕಪ್ ಆತಿಥ್ಯಕ್ಕೆ ಸಿದ್ಧರಾಗಿದ್ದೇವೆ ಎಂದು ಆಸ್ಟ್ರೇಲಿಯಾದ ಕ್ರೀಡಾ ಸಚಿವರು ಸಕಾರಾತ್ಮಕ ಹೇಳಿಕೆ ನೀಡಿರುವುದು ಐಸಿಸಿ ನಿರ್ಧಾರ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.

2021ರ ಮಹಿಳೆಯರ ಏಕದಿನ ವಿಶ್ವಕಪ್ ಭವಿಷ್ಯ ವನ್ನೂ ಐಸಿಸಿ ಮುಂದಿನ ತಿಂಗಳು ನಿರ್ಧರಿಸಲಿದೆ. ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಬಗ್ಗೆಯೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಐಪಿಎಲ್ ಗೊಂದಲವೂ ಮುಂದುವರಿಯಲಿದೆ: ಟಿ20 ವಿಶ್ವಕಪ್ ಭವಿಷ್ಯದ ಗೊಂದಲ ಇನ್ನೊಂದು ತಿಂಗಳು ಮುಂದುವರಿಯಲಿರುವುದರಿಂದ ಐಪಿಎಲ್ 13ನೇ ಆವೃತ್ತಿಯ ಬಗ್ಗೆ ನಿರ್ಧರಿಸಲು ಬಿಸಿಸಿಐಗೂ ಸಾಧ್ಯವಾಗುವುದಿಲ್ಲ. ಟಿ20 ವಿಶ್ವಕಪ್ ಮುಂದೂಡಿಕೆಯಾದರೆ, ಅಕ್ಟೋಬರ್- ನವೆಂಬರ್​ನಲ್ಲಿ ಐಪಿಎಲ್ ಆಯೋಜಿಸುವುದು ಬಿಸಿಸಿಐ ಯೋಜನೆಯಾಗಿದೆ.

ಬಿಸಿಸಿಐಗೆ ಗಡುವು ವಿಸ್ತರಣೆ: ಭಾರತದಲ್ಲಿ ನಿಗದಿಯಾಗಿ ರುವ 2021ರ ಟಿ20 ವಿಶ್ವಕಪ್ ಟೂರ್ನಿಗೆ ಕೇಂದ್ರ ಸರ್ಕಾರ ದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಬಿಸಿಸಿಐಗೆ ನೀಡಲಾಗಿದ್ದ ಗಡುವನ್ನು ಐಸಿಸಿ ಈ ವರ್ಷದ ಡಿಸೆಂಬರ್​ವರೆಗೂ ವಿಸ್ತರಿಸಿದೆ. ಈ ಮುನ್ನ 2019ರ ಡಿಸೆಂಬರ್​ವರೆಗೆ ಐಸಿಸಿ ಮೊದಲ ಗಡುವು ನೀಡಿತ್ತು. ಬಳಿಕ ಇದನ್ನು ಈ ವರ್ಷ ಮೇ 18ರವರೆಗೆ ವಿಸ್ತರಿಸಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಬಿಸಿಸಿಐಗೆ ಸರ್ಕಾರದ ಜತೆಗೆ ಮಾತುಕತೆ ನಡೆಸಲು ಸಾಧ್ಯವಾಗಿರಲಿಲ್ಲ. -ಪಿಟಿಐ/ಏಜೆನ್ಸೀಸ್

ಆಗಸ್ಟ್​ನಲ್ಲಿ ಶ್ರೀಲಂಕಾ ಪ್ರವಾಸ?

ಕರೊನಾ ಹಾವಳಿ ನಂತರ ಭಾರತ ತಂಡ ಆಗಸ್ಟ್ ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಮೂಲಕ ಭಾರತದ ಅಭಿಯಾನ ಪುನರಾರಂಭಗೊಳ್ಳಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಈಗಾಗಲೆ ಹಸಿರು ನಿಶಾನೆ ತೋರಿದ್ದರೂ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಬಾಕಿ ಇದೆ ಎನ್ನಲಾಗಿದೆ.

ಜುಲೈನಿಂದ ಕೆಎಸ್​ಸಿಎ ಟೂರ್ನಿ?

ಜುಲೈ ಮೊದಲ ವಾರದಿಂದ ಕ್ರಿಕೆಟ್ ಋತುವನ್ನು ಆರಂಭಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಯೋಜನೆ ಹಾಕಿಕೊಂಡಿದೆ. ಕ್ರಿಕೆಟ್ ಕ್ಯಾಲೆಂಡರ್ ಪರಿಷ್ಕರಿಸಿ ತಾತ್ಕಾಲಿಕ ಯೋಜನೆಯನ್ನೂ ರೂಪಿಸಲಾಗಿದೆ. ಆದರೆ ಇವೆಲ್ಲವೂ ಕ್ರಿಕೆಟ್ ಆಟಕ್ಕೆ ಸೂಕ್ತ ವಾತಾವರಣ ನಿರ್ವಣಗೊಳ್ಳುವುದನ್ನು ಅವಲಂಬಿಸಿರುತ್ತದೆ. ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನೂ ಕೆಎಸ್​ಸಿಎ ಸಿದ್ಧಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net