ವೈದ್ಯೆ, ನೃತ್ಯ ಸಂಯೋಜಕಿ ಧನಶ್ರೀ ವರ್ಮ ಜತೆಗೆ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ನಿಶ್ಚಿತಾರ್ಥ

chahal website
Published on

ಬೆಂಗಳೂರು: ಭಾರತ ತಂಡದ ಲೆಗ್-ಸ್ಪಿನ್ನರ್ ಯಜುವೇಂದ್ರ ಚಾಹಲ್ ಶನಿವಾರ ನೃತ್ಯಸಂಯೋಜಕಿ ಧನಶ್ರೀ ವರ್ಮ ಜತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಜತೆಗೆ ಮಾಹಿತಿ ಹಂಚಿಕೊಂಡಿರುವ ಚಾಹಲ್, ‘ವಿ ಸೆಡ್ ಎಸ್, ವಿತ್ ಅವರ್ ಫ್ಯಾಮಿಲಿ (ಕುಟುಂಬದ ಜತೆಗೂಡಿ ಹೌದು ಎಂದೆವು) ಎಂದು ಬರೆದುಕೊಂಡಿದ್ದಾರೆ. ಚಾಹಲ್ ಹಾಗೂ ಧನಶ್ರೀ ಕುಟುಂಬದವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಧನಶ್ರೀ, ವೃತ್ತಿಯಲ್ಲಿ ವೈದ್ಯೆ ಹಾಗೂ ನೃತ್ಯ ಸಂಯೋಜಕಿ ಆಗಿದ್ದಾರೆ. ಚಾಹಲ್-ಧನಶ್ರೀ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಧನಶ್ರೀ ಜತೆಗಿನ ನಿಶ್ಚಿತಾರ್ಥ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಬೆನ್ನಲ್ಲೇ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಾಶಯ ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ಚಾಹಲ್ ಆಡುವ ಆರ್‌ಸಿಬಿ ತಂಡದಿಂದ ಶುಭಾಶಯ ಕೋರಲಾಗಿದೆ. ಟೀಮ್ ಇಂಡಿಯಾ ಆಟಗಾರ ಶಿಖರ್ ಧವನ್, ಫೀಲ್ಡಿಂಗ್ ಕೋಚ್ ರವಿ ಶ್ರೀಧರ್, ವೇಗಿ ಭುವನೇಶ್ವರ್ ಕುಮಾರ್ ಸೇರಿದಂತೆ ಬಾಲಿವುಡ್ ನಟ-ನಟಿಯರು ವಿಷ್ ಮಾಡಿದ್ದಾರೆ.

30 ವರ್ಷದ ಯಜುವೇಂದ್ರ ಚಾಹಲ್, ಇದುವರೆಗೂ ರಾಷ್ಟ್ರೀಯ ತಂಡದ ಪರ 52 ಏಕದಿನ ಹಾಗೂ 42 ಟಿ20 ಪಂದ್ಯಗಳಿಂದ ಕ್ರಮವಾಗಿ 91 ಹಾಗೂ 55 ವಿಕೆಟ್ ಕಬಳಿಸಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net