ಅಭ್ಯಾಸ ಆರಂಭಿಸಿದ ಪಿವಿ ಸಿಂಧು, ಪ್ರಣೀತ್, ಸಿಕ್ಕಿ ರೆಡ್ಡಿ

Sindhujpg
Published on

ನವದೆಹಲಿ: ಸ್ಟಾರ್ ಷಟ್ಲರ್‌ಗಳಾದ ವಿಶ್ವ ಚಾಂಪಿಯನ್ ಪಿವಿ ಸಿಂಧು, ಬಿ.ಸಾಯಿ ಪ್ರಣೀತ್ ಹಾಗೂ ಎನ್.ಸಿಕ್ಕಿ ರೆಡ್ಡಿ ಶುಕ್ರವಾರ ಹೈದರಾಬಾದ್‌ನಲ್ಲಿರುವ ಸಾಯಿ ಪುಲ್ಲೆಲಾ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿದರು. ತೆಲಂಗಾಣ ಸರ್ಕಾರದ ಮಾರ್ಗಸೂಚಿಯಂತೆ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದರು.

ಕೋವಿಡ್-19 ರಿಂದಾಗಿ ಕಳೆದ ನಾಲ್ಕೂ ತಿಂಗಳಿಂದ ಅಕಾಡೆಮಿ ಬಂದ್ ಮಾಡಲಾಗಿತ್ತು. ಆಗಸ್ಟ್ 1 ರಂದು ತೆಲಂಗಾಣ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಭರವಸೆ ಇರುವ 8 ಷಟ್ಲರ್‌ಗಳಿಗಾಗಿ ರಾಷ್ಟ್ರೀಯ ಶಿಬಿರ ಆಯೋಜಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ನಿರ್ಧರಿಸಿತ್ತು.

ಎಲೈಟ್ ಷಟ್ಲರ್‌ಗಳು ವಾಪಸ್ ಅಭ್ಯಾಸಕ್ಕೆ ಆಗಮಿಸಿರುವುದು ಖುಷಿಯ ವಿಚಾರ. ಸುರಕ್ಷತಾ ವಾತಾವರಣದಲ್ಲಿ ಅಭ್ಯಾಸ ನಡೆಸಲಾಗುತ್ತಿದೆ. ಇದಕ್ಕಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ತಂಡದ ಮುಖ್ಯಕೋಚ್ ಗೋಪಿಚಂದ್ ತಿಳಿಸಿದ್ದಾರೆ.

ಈ ಮೂವರು ಅಲ್ಲದೆ, ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಮಾಜಿ ವಿಶ್ವ ನಂ.1 ಕೆ. ಶ್ರೀಕಾಂತ್, ಮಹಿಳೆಯರ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ಒಳಗೊಂಡಂತೆ 8 ಮಂದಿಯನ್ನು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ.

ಹೈದರಾಬಾದ್‌ನಲ್ಲೇ ಇರುವ ಸೈನಾ ನೆಹ್ವಾಲ್ ಶುಕ್ರವಾರ ಅಭ್ಯಾಸದಿಂದ ದೂರ ಉಳಿದರು. ಉಳಿದ ಷಟ್ಲರ್‌ಗಳು ಕಳೆದ ಮಾರ್ಚ್‌ನಲ್ಲಿ ತವರಿಗೆ ತೆರಳಿದ್ದು, ಹೈದರಾಬಾದ್‌ಗೆ ಆಗಮಿಸಬೇಕಿದೆ. ಪಿವಿ ಸಿಂಧು ಬೆಳಗ್ಗೆ 6.30 ರಿಂದ 8.30 ರವರೆಗೆ ಪ್ರತ್ಯೇಕವಾಗಿ ಗೋಪಿಚಂದ್ ಹಾಗೂ ವಿದೇಶಿ ಕೋಚ್ ಪಾರ್ಕ್ ಟೀ ಸಾಂಗ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net