PHOTO | ಕ್ರಿಕೆಟ್ ಜನಕರ ನಾಡಿನಲ್ಲಿ ಟೀಮ್ ಇಂಡಿಯಾ ಕ್ವಾರಂಟೈನ್

team insia web
Published on

ಲಂಡನ್: ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ನ ಫೈನಲ್ ಮತ್ತು ಆತಿಥೇಯರ ವಿರುದ್ಧದ ಟೆಸ್ಟ್ ಸರಣಿಗಾಗಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗುರುವಾರ ಇಂಗ್ಲೆಂಡ್‌ಗೆ ತಲುಪಿದೆ. ಪುರುಷರ ತಂಡದ ಜತೆಗೆ ಮಹಿಳೆಯರ ತಂಡವೂ ಆತಿಥೇಯರ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಾಗಿ ಆಂಗ್ಲರ ನಾಡು ಪ್ರವೇಶಿಸಿದೆ.

ಭಾರತ ತಂಡದ ಆಟಗಾರರು ಬುಧವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಪ್ರಯಾಣಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಮತ್ತು ಪುತ್ರಿ ವಾಮಿಕಾ ಜತೆಗೂಡಿ ಬಸ್‌ನಿಂದ ಇಳಿದು ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.

ಗುರುವಾರ ಲಂಡನ್ ತಲುಪಿದ ಬಳಿಕ ಪುರುಷ-ಮಹಿಳಾ ತಂಡಗಳೆರಡೂ ಸೌಥಾಂಪ್ಟನ್‌ಗೆ ತೆರಳಿ ದಿ ಏಜಿಯಸ್ ಬೌಲ್ ಕ್ರೀಡಾಂಗಣದ ಆವರಣದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿವೆ. ಈ ವೇಳೆ ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಮೈದಾನದ ಹಿನ್ನೆಲೆಯೊಂದಿಗೆ ಕ್ಲಿಕ್ಕಿಸಿರುವ ಚಿತ್ರಗಳನ್ನು ರೋಹಿತ್ ಶರ್ಮ, ಕನ್ನಡಿಗ ಮಯಾಂಕ್ ಅಗರ್ವಾಲ್, ಜಸ್‌ಪ್ರೀತ್ ಬುಮ್ರಾ ಮತ್ತಿತರ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು 3 ದಿನಗಳ ಕಾಲ ತಂಡಗಳು ಹಾರ್ಡ್ ಕ್ವಾರಂಟೈನ್ ಇರಲಿದ್ದು, ಬಳಿಕ 7 ದಿನಗಳ ಕಾಲ ಕ್ವಾರಂಟೈನ್ ಅವಧಿಯಲ್ಲಿ ಜಿಮ್ ವ್ಯಾಯಾಮ ಮತ್ತು ನೆಟ್ ಅಭ್ಯಾಸಕ್ಕೂ ಅವಕಾಶ ಲಭಿಸಲಿದೆ. ಮಹಿಳಾ ತಂಡ 3 ದಿನಗಳ ಹಾರ್ಡ್ ಕ್ವಾರಂಟೈನ್ ಬಳಿಕ ಬ್ರಿಸ್ಟಲ್‌ಗೆ ತೆರಳಲಿದ್ದು, ಜೂನ್ 16ರಿಂದ ಅಲ್ಲಿ ಆತಿಥೇಯರ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ಬಳಿಕ ಜುಲೈ 15ರವರೆಗೆ ತಲಾ 3 ಏಕದಿನ, ಟಿ20 ಪಂದ್ಯಗಳನ್ನೂ ಆಡಲಿದೆ. ತಂಡಗಳು ಪ್ರವಾಸಕ್ಕೆ ಮುನ್ನ ಮುಂಬೈ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಪೂರೈಸಿವೆ. ಜೂನ್ 18ರಿಂದ ಡಬ್ಲ್ಯುಟಿಸಿ ಫೈನಲ್ ಆಡುವುದಕ್ಕೆ ಮುನ್ನ 24 ಸದಸ್ಯರ ಭಾರತ ತಂಡ 2 ತಂಡಗಳಾಗಿ ವಿಭಾಗಿಸಲ್ಪಟ್ಟು ತ್ರಿದಿನ ಅಭ್ಯಾಸ ಪಂದ್ಯವನ್ನೂ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net