

ಲಂಡನ್: ನ್ಯೂಜಿಲೆಂಡ್‌ನ ಎಡಗೈ ಆರಂಭಿಕ ಡೆವೊನ್ ಕಾನ್‌ವೇ ಚೊಚ್ಚಲ ಟೆಸ್ಟ್‌ನಲ್ಲೇ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಶತಕ ಸಿಡಿಸಿ ಭಾರತದ ಸೌರವ್ ಗಂಗೂಲಿ ಅವರ 25 ವರ್ಷ ಹಿಂದಿನ ದಾಖಲೆ ಮುರಿದಿದ್ದ ಕಾನ್‌ವೇ, 2ನೇ ದಿನದಾಟದಲ್ಲಿ ದ್ವಿಶತಕ ಪೂರೈಸುವ ಮೂಲಕ ಭಾರತದ ಕ್ರಿಕೆಟ್ ದಿಗ್ಗಜ ಕೆಎಸ್ ರಣಜಿತ್‌ಸಿನ್ಹಾಜಿ ಅವರ 125 ವರ್ಷ ಹಿಂದಿನ ದಾಖಲೆಯನ್ನೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.
ದ್ವಿಶತಕ ಸಾಧನೆಯೊಂದಿಗೆ ಡೆವೊನ್ ಕಾನ್‌ವೇ ಇಂಗ್ಲೆಂಡ್ ನೆಲದಲ್ಲಿ ಪದಾರ್ಪಣೆ ಟೆಸ್ಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು. 1896ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಭಾರತದ ಕೆಎಸ್ ರಣಜಿತ್‌ಸಿನ್ಹಾಜಿ ಇಂಗ್ಲೆಂಡ್ ಪರ ಪದಾರ್ಪಣೆ ಟೆಸ್ಟ್‌ನಲ್ಲಿ 154 ರನ್ ಗಳಿಸಿದ್ದು ಹಿಂದಿನ ದಾಖಲೆ. ಸ್ವಾತಂತ್ರ್ಯಕ್ಕೆ ಮುನ್ನ ಭಾರತದ ನವಾನಗರದ ಮಹಾರಾಜರಾಗಿದ್ದ ರಣಜಿತ್‌ಸಿನ್ಹಾಜಿ ಇಂಗ್ಲೆಂಡ್ ಪರ 15 ಟೆಸ್ಟ್ ಆಡಿದ ಬಳಿಕ ತವರಿಗೆ ಮರಳಿ ಭಾರತದ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿದ್ದರು. ಭಾರತದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯನ್ನು ಅವರದೇ ಹೆಸರಿನಲ್ಲಿ ಆಡಲಾಗುತ್ತದೆ.
ಕಾನ್‌ವೇ 200, ನ್ಯೂಜಿಲೆಂಡ್ 378
ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ ಎಡಗೈ ಆರಂಭಿಕ ಡೆವೊನ್ ಕಾನ್‌ವೇ (200 ರನ್, 347 ಎಸೆತ, 22 ಬೌಂಡರಿ, 1 ಸಿಕ್ಸರ್) ಸಾಹಸದಿಂದ ನ್ಯೂಜಿಲೆಂಡ್ ತಂಡ ಉತ್ತಮ ಮೊತ್ತ ಪೇರಿಸಿದೆ. ಲಾರ್ಡ್ಸ್ ಮೈದಾನದಲ್ಲಿ 3 ವಿಕೆಟ್‌ಗೆ 246 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಕಿವೀಸ್ ತಂಡ ಭೋಜನ ವಿರಾಮದ ಬಳಿಕ 378 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ದಿನದಂತ್ಯದ ವೇಳೆಗೆ 2 ವಿಕೆಟ್‌ಗೆ 111 ರನ್ ಗಳಿಸಿದ್ದು, ಇನ್ನೂ 267 ರನ್ ಹಿನ್ನಡೆಯಲ್ಲಿದೆ. ರೋರಿ ಬರ್ನ್ಸ್ (59*) ಮತ್ತು ನಾಯಕ ಜೋ ರೂಟ್ (42*) ಮುರಿಯದ 3ನೇ ವಿಕೆಟ್‌ಗೆ 92 ರನ್ ಸೇರಿಸಿ ಕ್ರೀಸ್‌ನಲ್ಲಿದ್ದಾರೆ.
ಇದಕ್ಕೂ ಮುನ್ನ ಕಾನ್‌ವೇ ಜತೆಗೆ 174 ರನ್ ಜತೆಯಾಟವಾಡಿದ ಹೆನ್ರಿ ನಿಕೋಲ್ಸ್ (61) ಔಟಾದ ಬೆನ್ನಲ್ಲೇ ಕಿವೀಸ್ ತಂಡ ದಿಢೀರ್ ಕುಸಿತ ಕಂಡಿತು. ಕೊನೇ ಬ್ಯಾಟ್ಸ್‌ಮನ್ ಕಣಕ್ಕಿಳಿದಾಗ ಕಾನ್‌ವೇ 186 ರನ್ ಗಳಿಸಿ ದ್ವಿಶತಕ ಕೈತಪ್ಪುವ ಭೀತಿಯಲ್ಲಿದ್ದರು. ಆದರೆ ನೀಲ್ ವ್ಯಾಗ್ನರ್ (25*) ನೀಡಿದ ಅಗತ್ಯ ಬೆಂಬಲದಿಂದ ಕಾನ್‌ವೇ, ಮಾರ್ಕ್ ವುಡ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ದ್ವಿಶತಕ ಪೂರೈಸಿದರು. ಕೊನೇ ವಿಕೆಟ್‌ಗೆ 40 ರನ್ ಸೇರಿಸಿದ ಬಳಿಕ ರನೌಟ್ ಮೂಲಕ ಕಾನ್‌ವೇ ಸುದೀರ್ಘ ಇನಿಂಗ್ಸ್‌ಗೆ ತೆರೆಬಿದ್ದಿತು. ಕಾನ್‌ವೇ ಚೊಚ್ಚಲ ಟೆಸ್ಟ್‌ನಲ್ಲೇ ದ್ವಿಶತಕ ಸಿಡಿಸಿದ ನ್ಯೂಜಿಲೆಂಡ್‌ನ 2ನೇ ಬ್ಯಾಟ್ಸ್‌ಮನ್ ಎನಿಸಿದರು. ಮ್ಯಾಥ್ಯೂ ಸಿಂಕ್ಲೇರ್ ಮೊದಲಿಗ.
ನ್ಯೂಜಿಲೆಂಡ್: 122.4 ಓವರ್‌ಗಳಲ್ಲಿ 378 (ಕಾನ್‌ವೇ 200, ನಿಕೋಲ್ಸ್ 61, ವಾಟ್ಲಿಂಗ್ 1, ಗ್ರಾಂಡ್‌ಹೋಮ್ 0, ವ್ಯಾಗ್ನರ್ 25*, ರಾಬಿನ್‌ಸನ್ 75ಕ್ಕೆ 4, ವುಡ್ 81ಕ್ಕೆ 3, ಆಂಡರ್‌ಸನ್ 83ಕ್ಕೆ 2). ಇಂಗ್ಲೆಂಡ್: 43 ಓವರ್‌ಗಳಲ್ಲಿ 2 ವಿಕೆಟ್‌ಗೆ 111 (ರೋರಿ ಬರ್ನ್ಸ್ 59*, ಸಿಬ್ಲೆ 0, ಕ್ರೌಲಿ 2, ರೂಟ್ 42*, ಜೇಮಿಸನ್ 29ಕ್ಕೆ 1, ಸೌಥಿ 17ಕ್ಕೆ 1).