ಇಂದಿನಿಂದ ಭಾರತ-ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಸಮರ

ind vs new web
Published on

ಸೌಥಾಂಪ್ಟನ್: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಭಾರತ ತಂಡ ಏಜಿಯಸ್ ಬೌಲ್‌ನಲ್ಲಿ ಶುಕ್ರವಾರದಿಂದ ನಡೆಯಲಿರುವ ಕಾದಾಟದಲ್ಲಿ ವಿಶ್ವ ನಂ. 1 ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಐಸಿಸಿ ಟೂರ್ನಿಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿರುವ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಚೊಚ್ಚಲ ಐಸಿಸಿ ಟ್ರೋಫಿ ಒಲಿಸಿಕೊಳ್ಳಲು ಟೀಮ್ ಇಂಡಿಯಾಗೆ ಇದು ಅತ್ಯುತ್ತಮ ಅವಕಾಶವಾಗಿದೆ.

144 ವರ್ಷಗಳ ಇತಿಹಾಸ ಹೊಂದಿರುವ ಕ್ರಿಕೆಟ್‌ನ ಅತ್ಯುನ್ನತ ಪ್ರಕಾರವಾದ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕೃತ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದ್ದು, ಕರೊನಾ ಹಾವಳಿಯ ನಡುವೆಯೂ ಈ ಸಮರ ವಿಶ್ವದ ಗಮನ ಸೆಳೆದಿದೆ. ಉಭಯ ತಂಡಗಳೆರಡೂ ಬಲಿಷ್ಠ ಬ್ಯಾಟಿಂಗ್-ಬೌಲಿಂಗ್ ವಿಭಾಗಗಳನ್ನು ಹೊಂದಿರುವ ನಡುವೆಯೂ ಹೆಚ್ಚಿನ ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಸದ್ಯ ನ್ಯೂಜಿಲೆಂಡ್ ತಂಡವೇ ೇವರಿಟ್ ಎನಿಸಿದೆ. ಈ ಪಂದ್ಯಕ್ಕೆ ಮುನ್ನ ನ್ಯೂಜಿಲೆಂಡ್ ತಂಡ ಆತಿಥೇಯರ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಿ ಗೆದ್ದಿರುವುದು ಮತ್ತು ಇಂಗ್ಲೆಂಡ್‌ನ ಸ್ಪೀಡ್ ಬೌಲಿಂಗ್ ಪಿಚ್ ಕಿವೀಸ್ ತಂಡಕ್ಕೆ ಹೆಚ್ಚು ಲಾಭದಾಯಕ ಎನಿಸಿರುವುದು ಇದಕ್ಕೆ ಕಾರಣ. ಆದರೆ ಭಾರತ ಇತ್ತೀಚೆಗಿನ ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಎಲ್ಲ ರೀತಿಯ ಸವಾಲುಗಳನ್ನು ಮೆಟ್ಟಿ ನಿಂತಿದೆ ಎಂಬುದನ್ನು ಮರೆಯಬಾರದು. ಭಾರತದ ಬ್ಯಾಟಿಂಗ್ ವಿಭಾಗ ವಿಶ್ವದಲ್ಲೇ ಅತ್ಯಂತ ಬಲಿಷ್ಠವೆನಿಸಿದ್ದರೆ, ಬೌಲಿಂಗ್ ವಿಭಾಗವೂ ಈಗ ಪ್ರಬಲ ಶಕ್ತಿಯಾಗಿದೆ. ಇನ್ನು ಸ್ಪಿನ್ ವಿಭಾಗದಲ್ಲೂ ಭಾರತ ವಿಶ್ವ ದರ್ಜೆಯ ಸ್ಪಿನ್ನರ್‌ಗಳಿಂದ ಕೂಡಿದೆ. ಆಸ್ಟ್ರೇಲಿಯಾವನ್ನು ಅದರದೇ ನೆಲದಲ್ಲಿ ಸತತ 2 ಟೆಸ್ಟ್ ಸರಣಿಗಳಲ್ಲಿ ಸೋಲಿಸಿರುವುದು ಭಾರತ ಯಾವುದೇ ರೀತಿಯ ಪಿಚ್‌ನಲ್ಲಿ ಗೆಲ್ಲಬಹುದೆಂಬುದನ್ನು ನಿರೂಪಿಸಿದೆ. ಹೀಗಾಗಿ ಪಂದ್ಯದ ಮೇಲಿನ ಕುತೂಹಲ ಸಾಕಷ್ಟು ಹೆಚ್ಚಾಗಿದೆ.

ಇಬ್ಬರು ಸ್ಪಿನ್ನರ್ಸ್‌ ಕಣಕ್ಕೆ

ಭಾರತ ತಂಡ ಪಂದ್ಯಕ್ಕೆ ಮುನ್ನಾದಿನವಾದ ಗುರುವಾರವೇ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಇಬ್ಬರನ್ನೂ ಆಡಿಸುವ ಮೂಲಕ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ. ಹನುಮ ವಿಹಾರಿ, ಮೊಹಮದ್ ಸಿರಾಜ್, ವೃದ್ಧಿಮಾನ್ ಸಾಹ ಮತ್ತು ಉಮೇಶ್ ಯಾದವ್ ಆಡುವ ಬಳಗದಿಂದ ಹೊರಗುಳಿದಿರುವ 15ರ ಬಳಗದ ಸದಸ್ಯರು. ಇಶಾಂತ್ ಶರ್ಮ, ಮೊಹಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ಕಣಕ್ಕಿಳಿಯಲಿರುವ ಮೂವರು ವೇಗಿಗಳಾಗಿದ್ದಾರೆ.

*ಸಂಭಾವ್ಯ ತಂಡಗಳು:

ಭಾರತ: ರೋಹಿತ್ ಶರ್ಮ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮದ್ ಶಮಿ.

ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್ (ವಿ.ಕೀ), ಅಜಾಜ್ ಪಟೇಲ್, ಕೈಲ್ ಜೇಮಿಸನ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಡ್ರಾ-ಟೈ ಆದ್ರೆ ಜಂಟಿ ಚಾಂಪಿಯನ್

ಪಂದ್ಯದಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಸಿಗಲಿದೆ. ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಟ್ರೋಫಿ ನೀಡಲಾಗುವುದಿಲ್ಲ. ಪಂದ್ಯ ಡ್ರಾ ಅಥವಾ ಟೈ ಆದರೆ ಟ್ರೋಫಿ ಹಂಚಿ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ೋಷಿಸಲಾಗುವುದು.

ಮಳೆ ಕಾಡಿದರೆ ಮೀಸಲು ದಿನ ಆಟ

ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಇದೆ. ಹೀಗಾಗಿ ಅಗತ್ಯ ಬಿದ್ದರೆ ಮೀಸಲು ದಿನವಾದ ಜೂನ್ 23ರಂದು ಕೂಡ ಆಟ ನಡೆಯಲಿದೆ. ಆದರೆ ಪಂದ್ಯದ 5 ದಿನಗಳಲ್ಲಿ ಮಳೆ ಅಥವಾ ಇತರ ಕಾರಣದಿಂದ ಆಟ ನಷ್ಟವಾಗದಿದ್ದರೆ ಮತ್ತು ನಷ್ಟಗೊಂಡ ಆಟವನ್ನು 5ನೇ ದಿನದಾಟ ಮುಕ್ತಾಯಕ್ಕೆ ಮುನ್ನವೇ ಹೆಚ್ಚುವರಿ ಆಟದ ಮೂಲಕ ಭರ್ತಿ ಮಾಡಿಕೊಂಡಿದ್ದರೆ ಆಗ 6ನೇ ದಿನ ಆಟ ನಡೆಯುವುದಿಲ್ಲ ಮತ್ತು ಆಗ 5ನೇ ದಿನದಂತ್ಯಕ್ಕೆ ಸ್ಪಷ್ಟ ಲಿತಾಂಶ ಬಂದಿರದಿದ್ದರೆ ಪಂದ್ಯ ಡ್ರಾ ಎಂದೇ ೋಷಿಸಲ್ಪಡಲಿದೆ. ಲಿತಾಂಶ ನಿರ್ಧಾರದ ಒಂದೇ ಕಾರಣಕ್ಕಾಗಿ ಮೀಸಲು ದಿನಕ್ಕೆ ಆಟ ವಿಸ್ತರಣೆಯಾಗುವುದಿಲ್ಲ.

ಬಹುಮಾನ ಮೊತ್ತ

*ಚಾಂಪಿಯನ್ ತಂಡಕ್ಕೆ 11.71 ಕೋಟಿ ರೂ.

*ರನ್ನರ್‌ಅಪ್ ತಂಡಕ್ಕೆ 5.85 ಕೋಟಿ ರೂ.

*ಜಂಟಿ ಚಾಂಪಿಯನ್ಸ್‌ಗೆ ತಲಾ 8.78 ಕೋಟಿ ರೂ.

ಗದೆ ಟ್ರೋಫಿ

ವಿಜೇತರಿಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಗದೆಯನ್ನು ಟ್ರೋಫಿಯಾಗಿ ವಿತರಿಸಲಾಗುತ್ತದೆ. ಇದನ್ನು ಈ ಹಿಂದೆ ಪ್ರತಿ ವರ್ಷ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನ ಪಡೆದ ತಂಡಕ್ಕೆ ನೀಡಲಾಗುತ್ತಿತ್ತು. ಜಂಟಿ ಚಾಂಪಿಯನ್ ಆದರೆ ಇದೇ ಟ್ರೋಫಿ ಹಂಚಿಕೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.

*ಮುಖಾಮುಖಿ: 59

ಭಾರತ: 21

ನ್ಯೂಜಿಲೆಂಡ್: 12

ಡ್ರಾ: 26

*ಇಂಗ್ಲೆಂಡ್‌ನಲ್ಲಿ ಭಾರತ:

ಟೆಸ್ಟ್: 62

ಜಯ: 7

ಸೋಲು: 34

ಡ್ರಾ: 21

ಇಂಗ್ಲೆಂಡ್‌ನಲ್ಲಿ ಕಿವೀಸ್:

ಟೆಸ್ಟ್: 56

ಜಯ: 6

ಸೋಲು: 30

ಡ್ರಾ: 20

*20: ವಿರಾಟ್ ಕೊಹ್ಲಿ ಕಳೆದ 20 ತಿಂಗಳಿನಿಂದ ಯಾವುದೇ ಕ್ರಿಕೆಟ್ ಪ್ರಕಾರದಲ್ಲಿ ಶತಕ ಸಿಡಿಸದ ಕೊರತೆ ಎದುರಿಸುತ್ತಿದ್ದಾರೆ. 2019ರ ನವೆಂಬರ್‌ನಲ್ಲಿ ಕೋಲ್ಕತ ಟೆಸ್ಟ್‌ನಲ್ಲಿ ಅವರ ಕೊನೇ ಶತಕ ಸಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net