

ಸೌಥಾಂಪ್ಟನ್: ಪ್ರತಿಷ್ಠಿತ ಡಬ್ಲ್ಯುಟಿಸಿ ಫೈನಲ್ ಪಂದ್ಯದ ರೋಚಕತೆಗೆ ಭಾರತ-ಕಿವೀಸ್ ಸಜ್ಜಾಗುತ್ತಿರುವ ನಡುವೆ ಮಳೆ ಭೀತಿಯ ಕಹಿ ಸುದ್ದಿ ಎದುರಾಗಿದೆ. ಪಂದ್ಯದ ಐದೂ ದಿನಗಳ ಕಾಲ ಮಳೆ ಕಾಡುವ ಸಾಧ್ಯತೆ ಇದೆ ಎಂದು ಸೌಥಾಂಪ್ಟನ್ ಹವಾಮಾನ ವರದಿ ತಿಳಿಸಿದ್ದು, ವಿರಾಟ್ ಕೊಹ್ಲಿ-ಕೇನ್ ವಿಲಿಯಮ್ಸನ್ ಟ್ರೋಫಿ ಹಂಚಿಕೊಳ್ಳುವ ಸಂದರ್ಭ ಎದುರಾದರೂ ಅಚ್ಚರಿ ಇಲ್ಲವೆನಿಸಿದೆ.
ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಸೋಮವಾರ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸೌಥಾಂಪ್ಟನ್ ಹವಾಮಾನ ವರದಿಯ ಪ್ರಕಾರ, ಪಂದ್ಯಕ್ಕೆ ಪ್ರತಿದಿನ ಮಳೆ ಅಡಚಣೆ ತರುವ ಸಾಧ್ಯತೆ ಶೇ. 70-80ರಷ್ಟಿದೆ. ಪಂದ್ಯ ಶುಕ್ರವಾರ ಶುರುವಾಗಲಿದೆ.
ಮಳೆ ಭೀತಿಯ ವರದಿಯು ಉಭಯ ತಂಡಗಳ ನಾಯಕರು ಟಾಸ್ ಗೆದ್ದಾಗ ತೆಗೆದುಕೊಳ್ಳುವ ನಿರ್ಧಾರ ಮತ್ತು ಆಡುವ 11ರ ಬಳಗದ ಆಯ್ಕೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಐಸಿಸಿ ನಿಯಮದ ಪ್ರಕಾರ ಪಂದ್ಯ ಡ್ರಾಗೊಂಡರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುವುದು.