

ಕಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಇಂದು (ನವೆಂಬರ್ 05) 35ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷವೇನೆಂದರೆ ಕೊಹ್ಲಿ ಜನ್ಮದಿನದಂದೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವನ್ನು ಗೆದ್ದು ವಿರಾಟ್ಗೆ ಭರ್ಜರಿ ಗಿಫ್ಟ್ ನೀಡಲು ಟೀಂ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ.
ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿದ್ದು, ಅಭಿಮಾನಿಗಳಿಂದ ಕಿಂಗ್ ಎಂದೇ ಕರೆಲ್ಪಡುತ್ತಿದ್ದಾರೆ. ಒಂದು ಶತಕ ಸೇರಿದಂತೆ ನಾಲ್ಕು ಅರ್ಧಶತಕಗಳನ್ನು ಗಳಿಸಿರುವ ಕೊಹ್ಲಿ ಇಂದು ನಡೆಯುವ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಈಗಾಗಲೇ ಏಕದಿನ ಕ್ರಿಕೆಟ್ನಲ್ಲಿ 48 ಶತಕ, 70 ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಪಂದ್ಯದಲ್ಲಿ ಶತಕ ಬಾರಿಸಿದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿರುವ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವಕಾಶವಿತ್ತಾದರೂ ಕಡೇ ಕ್ಷಣದಲ್ಲಿ ಕೆಟ್ಟ ಹೊಡೆತದಿಂದಾಗಿ ಶತಕ ವಂಚಿತರಾಗಿದ್ದರು. ಇನ್ನು ಇಂದು (ನವೆಂಬರ್ 05) ನಡೆಯುವ ಪಂದ್ಯದಲ್ಲಿ ಕೊಹ್ಲಿ 100ರನ್ ಬಾರಿಸಿದಲ್ಲಿ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ದಾಖಲೆಯನ್ನು ಮುರಿದ ಭಾರತದ ಬ್ಯಾಟ್ಸ್ಮನ್ ಎನ್ನಿಸಲಿದ್ದಾರೆ.
ಕೊಹ್ಲಿ ಪಾಲಿಗೆ ಈಡನ್ ಗಾರ್ಡನ್ ಅದೃಷ್ಟದ ಅಂಗಳ ಎಂದೇ ಹೇಳಲಾಗಿದೆ. ಏಕೆಂದರೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದು, ಇದೇ ಕ್ರೀಡಾಂಗಣದಲ್ಲಿ. 2009ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿದ್ದರು. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಈ ಸಾಧನೆ ಮಾಡುವರೇ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಗರಿಗೆದರಿದೆ.
ವಿರಾಟ್ ಕೊಹ್ಲಿ 35ನೇ ಜನ್ಮದಿನದ ಅಂಗವಾಗಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ಅವರ ಹುಟ್ಟುಹಬ್ಬವನ್ನು ಆಚರಿಸಲು ವಿಶೇಷ ಯೋಜನೆಗಳನ್ನು ಹಾಕಿಕೊಂಡಿತ್ತು. ಆದರೆ ಇದೀಗ ಈ ಎಲ್ಲ ಪ್ಲಾನ್ ಅನ್ನು ರದ್ದುಗೊಳಿಸಲಾಗಿದೆ. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ 70,000 ಕೊಹ್ಲಿಯ ಮುಖವಾಡಗಳನ್ನು ನೀಡಲು ವ್ಯವಸ್ಥೆ ಮಾಡಿತ್ತು. ಅದರೊಂದಿಗೆ ಪಟಾಕಿ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ವಿರಾಟ್ ಕೊಹ್ಲಿ ಜನ್ಮ ದಿನದ ಅಂಗವಾಗಿ ವಿಶೇಷ ಕೇಕ್ಅನ್ನು ಸಹ ಆರ್ಡರ್ ಮಾಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ಈ ಎಲ್ಲ ಕಾರ್ಯಕ್ರಮ ರದ್ದಾಗಿದೆ.
ಮೂಲಗಳ ಪ್ರಕಾರ, ಈ ಆಚರಣೆಯು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಎಲ್ಲ ಕಾರ್ಯಕ್ರಮವನ್ನು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ರದ್ದುಗೊಳಿಸಿದೆ ಎಂದು ಹೇಳಲಾಗಿದೆ. ಆದರೆ, ಅಭಿಮಾನಿಗಳು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹಾಡಲಿದ್ದಾರೆ. ಕೇಕ್ ಕಟ್ಟಿಂಗ್ ತಂಡದ ಡ್ರೆಸ್ಸಿಂಗ್ ರೂಮ್ನ ಒಳಗೆ ಮಾತ್ರ ನಡೆಯಲಿದೆಯಂತೆ.