ಇಂದು ಭಾರತ-ದಕ್ಷಿಣ ಆಫ್ರಿಕಾ 3ನೇ ಟಿ20; ಮುನ್ನಡೆಗಾಗಿ ಉಭಯ ತಂಡಗಳ ಕಾದಾಟ

Suryakumar Yadav
Published on

ಸೆಂಚುರಿಯನ್: ಯುವ ಬ್ಯಾಟರ್​ಗಳ ಅಸ್ಥಿರ ನಿರ್ವಹಣೆಯಿಂದ ಹಿನ್ನಡೆ ಎದುರಿಸಿ ಮುಗ್ಗರಿಸಿರುವ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ಸವಾಲಿಗೆ ಸಜ್ಜಾಗಿದೆ. ಸೆಂಚುರಿಯನ್​ನಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳು ಸೆಣಸಲಿವೆ. ಸರಣಿಯಲ್ಲಿ ಮುನ್ನಡೆ ವಿಸ್ತರಿಸುವ ಅವಕಾಶ ಕೈಚೆಲ್ಲಿರುವ ಸೂರ್ಯಕುಮಾರ್ ಬಳಗ ಪುಟಿದೇಳುವ ಮೂಲಕ ಗೆಲುವಿನ ಹಳಿಗೇರುವ ನಿರೀಕ್ಷೆಯಲ್ಲಿದೆ.

ಆತಿಥೇಯ ಹರಿಣಗಳ ಪಡೆ 2ನೇ ಟಿ20ಯಲ್ಲಿ ಪುಟಿದೇಳುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ. ಆದರೆ ಬ್ಯಾಟರ್​ಗಳ ಅಸ್ಥಿರ ನಿರ್ವಹಣೆ ಟೀಮ್ ಇಂಡಿಯಾಗೆ ಹಿನ್ನಡೆ ಎನಿಸಿದ್ದು, ಮೂರನೇ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ಹಂಬಲದಲ್ಲಿದೆ. 2009ರಿಂದ ಸೂಪರ್ ಸ್ಪೋರ್ಟ್ಸ್ ಮೈದಾನದಲ್ಲಿ ಭಾರತ ಕೇವಲ ಒಂದು ಪಂದ್ಯವನ್ನಾಡಿದ್ದು, 2018ರಲ್ಲಿ ಆಡಿದ ಕೊನೇ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಸೋತ ಹಿನ್ನಡೆ ಹೊಂದಿದೆ. ಅಂದಿನ ಭಾರತ ತಂಡದಲ್ಲಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸ್ತುತ ತಂಡದಲ್ಲಿರುವ ಏಕೈಕ ಆಟಗಾರ ಎನಿಸಿದ್ದಾರೆ. ಹರಿಣಗಳ ನಾಡಿನ ವೇಗದ ಹಾಗೂ ಬೌನ್ಸಿ ಪಿಚ್​ನಲ್ಲಿ ಭಾರತದ ಯುವ ಬ್ಯಾಟರ್​ಗಳು ರನ್​ಗಳಿಸಲು ಹರಸಾಹಸಪಡುತ್ತಿದ್ದಾರೆ. ಗೆರ್ಬೆಹದಲ್ಲಿನ ಪಿಚ್ ಸ್ವರೂಪವನ್ನೇ ಹೋಲುವ ಸೆಂಚುರಿಯನ್ ಪಿಚ್ ಭಾರತೀಯರಿಗೆ ನೈಜ ಸವಾಲು ಎನಿಸಿದೆ.

124 ರನ್​ಗಳನ್ನು ರಕ್ಷಿಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ವಿಫಲರಾದರು. ಸಂಘಟಿತ ಬೌಲಿಂಗ್ ಹೋರಾಟ ಭರವಸೆ ಮೂಡಿಸಿದೆ. ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಆವೇಶ್ ಖಾನ್ ಬದಲಿಗೆ ಯಶ್ ದಯಾಳ್ ಅಥವಾ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಹರಿಣ ಬೌನ್ಸಿ ಪಿಚ್​ನಲ್ಲೂ ವರುಣ್ ಚಕ್ರವರ್ತಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದು, ಇವರಿಗೆ ರವಿ ಬಿಷ್ಣೋಯಿ ಉತ್ತಮ ಬೆಂಬಲ ಒದಗಿಸಿದ್ದಾರೆ. ಹರಿಣಗಳ ವಿರುದ್ಧ ಸರಣಿ ಗೆಲುವಿನ ಆಸೆ ಜೀವಂತವಿರಿಸಲು ಸೂರ್ಯಕುಮಾರ್ ಪಡೆಗೆ ಗೆಲುವು ಅನಿವಾರ್ಯ. ಈ ಪಂದ್ಯದ ಗೆಲುವು ಅಂತಿಮ ಪಂದ್ಯಕ್ಕೆ ಮುನ್ನ ಯುವ ಭಾರತ ತಂಡಕ್ಕೆ ಮಾನಸಿಕ ಬಲವೂ ತುಂಬಲಿದೆ.

ಸಾಧಾರಣ ಗುರಿ ಬೆನ್ನತ್ತಲು ತವರಿನಲ್ಲಿ ಪರದಾಡಿರುವ ದ.ಆಫ್ರಿಕಾಕ್ಕೂ ಬ್ಯಾಟಿಂಗ್ ವಿಭಾಗದ ವೈಫಲ್ಯ ಪ್ರಮುಖ ಹಿನ್ನಡೆಯಾಗಿದೆ. ನಾಯಕ ಏಡನ್ ಮಾರ್ಕ್ರಮ್ ಸಹಿತ ಅನುಭವಿಗಳಾದ ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್ ಸರಣಿಯಲ್ಲಿ ನಿರಾಸೆ ಮೂಡಿಸಿದ್ದಾರೆ. ಐಪಿಎಲ್​ನಲ್ಲಿ ಸನ್​ರೈಸರ್ಸ್ ತಂಡದಿಂದ 23 ಕೋಟಿ ರೂ.ಗೆ ರಿಟೇನ್ ಆಗಿರುವ ಹೆನ್ರಿಕ್ ಕ್ಲಾಸೆನ್ ಅವರಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಮೂಡಿಬಂದಿಲ್ಲ.

ಅಭಿಷೇಕ್ ಬ್ಯಾಟಿಂಗ್ ವೈಫಲ್ಯ: ಐಸಿಸಿ ಟಿ20 ವಿಶ್ವಕಪ್ ಬಳಿಕ ಅನುಭವಿ ಆಟಗಾರರ ಗೈರಿನಲ್ಲಿ ಸತತ ಅವಕಾಶ ಗಿಟ್ಟಿಸಿಕೊಂಡಿರುವ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಕಳೆದ 10 ಇನಿಂಗ್ಸ್​ಗಳಲ್ಲಿ ಒಂದು ಶತಕ ಸಹಿತ 170 ರನ್ ಮಾತ್ರ ಕಲೆಹಾಕಿದ್ದಾರೆ. ಜತೆಗೆ ಸತತ 8 ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿಯೂ ಅಭಿಷೇಕ್ ವೈಫಲ್ಯ ಕಂಡಿದ್ದಾರೆ. ಜಿಂಬಾಬ್ವೆ ಎದುರು ಶತಕದೊಂದಿಗೆ ಉತ್ತಮ ಆರಂಭ ಪಡೆದ ಅಭಿಷೇಕ್ ನಂತರ 20ರ ಗಡಿ ದಾಟಲು ವಿಫಲವಾಗಿದ್ದಾರೆ.ಆರಂಭದಿಂದಲೂ ಬಿರುಸಿನಾಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲುತ್ತಿರುವ ಅಭಿಷೇಕ್ ಅವರಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗಿದೆ. ಶುಭಮಾನ್ ಗಿಲ್,ಯಶಸ್ವಿ ಜೈಸ್ವಾಲ್ ಅನುಪಸ್ಥಿತಿಯಲ್ಲಿ ಅಸ್ಥಿರ ನಿರ್ವಹಣೆ ಅವರಿಗೆ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳಲು ಹಿನ್ನಡೆಯಾಗಿದೆ.

ಅಸ್ಥಿರ ಬ್ಯಾಟಿಂಗ್: ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕ ವಿಫಲತೆ ಕಂಡರೆ, 2ನೇ ಪಂದ್ಯದಲ್ಲಿ ಅಗ್ರ ಕ್ರಮಾಂಕ ವೈಫಲ್ಯ ಅನುಭವಿಸಿದೆ. ನಾಯಕ ಸೂರ್ಯಕುಮಾರ್, ರಿಂಕು ಸಿಂಗ್ ಸರಣಿಯಲ್ಲಿ ನಿರೀಕ್ಷಿತ ರನ್ ಪೇರಿಸಿಲ್ಲ. ಸಂಜು ಸ್ಯಾಮ್ಸನ್ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಬೇಕಿದೆ. ಹಾರ್ದಿಕ್ ಪಾಂಡ್ಯ ಸಹ ಹಿಂದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ರನ್​ಗಳಿಸಲು ಪರದಾಡಿದರು. ಗಾಯಾಳು ಶಿವಂ ದುಬೆ ಬದಲಿಗೆ ಸರಣಿಯಲ್ಲಿ ಸ್ಥಾನ ಪಡೆದುಕೊಂಡ ತಿಲಕ್ ವರ್ಮ, ಅಕ್ಷರ್ ಪಟೇಲ್ ಸಿಕ್ಕ ಅವಕಾಶಗಳಲ್ಲಿ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ.

ಟೀಮ್ ನ್ಯೂಸ್

india
ಭಾರತ: ಅಭಿಷೇಕ್ ಶರ್ಮ ವೈಫಲ್ಯ ತಂಡಕ್ಕೆ ಹಿನ್ನಡೆ ಎನಿಸಿದೆ. ಅಭಿಷೇಕ್ ಬದಲಿಗೆ ತಿಲಕ್ ವರ್ಮ ಅವರನ್ನು ಆರಂಭಿಕನಾಗಿ ಬಡ್ತಿ ನೀಡಿದರೂ ಅಚ್ಚರಿ ಇಲ್ಲ. ಆಗ ಅಭಿಷೇಕ್ ಸ್ಥಾನದಲ್ಲಿ ಆಲ್ರೌಂಡರ್ ರಮಣ್​ದೀಪ್ ಸಿಂಗ್ ಪದಾರ್ಪಣೆಯ ನಿರೀಕ್ಷೆ ಇದೆ. ಇದು ತಂಡದ ಮಧ್ಯಮ ಕ್ರಮಾಂಕದ ಜತೆಗೆ ಬೌಲಿಂಗ್​ನಲ್ಲಿಯೂ ಹೆಚ್ಚುವರಿ ಆಯ್ಕೆ ನೀಡಲಿದೆ. ಅರ್ಷದೀಪ್ ಹಾಗೂ ಆವೇಶ್ ಖಾನ್ ಹಿಂದಿನ ಪಂದ್ಯದಲ್ಲಿ ದುಬಾರಿಯಾಗಿದ್ದು, ಯಶ್ ದಯಾಳ್ ಅಥವಾ ವೈಶಾಕ್ ವಿಜಯ್ ಕುಮಾರ್ ಚೊಚ್ಚಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
RSA
ದಕ್ಷಿಣ ಆಫ್ರಿಕಾ: ಗೆಲುವಿನ ಕಾಂಬಿನೇಷನ್​ನಲ್ಲಿ ಬದಲಾವಣೆಯ ಸಾಧ್ಯತೆಗಳು ಕಡಿಮೆ. ಸ್ಪಿನ್ನರ್ ಎನ್​ಕಬಯೋಮ್ಜಿ ಪೀಟರ್ ಬದಲಿಗೆ ವೇಗಿ ಒಟ್ನೀಲ್ ಬಾರ್ಟಮನ್ ಅಥವಾ ಲುಥಾವೊ ಸಿಪಮ್ಲಾ ಕಣಕ್ಕಿಳಿಯುವ ನಿರೀಕ್ಷೆ ಇದೆ.

2: ವೇಗಿ ಅರ್ಷದೀಪ್ ಸಿಂಗ್ (89) ಇನ್ನು 2 ವಿಕೆಟ್ ಪಡೆದರೆ, ಭಾರತದ ಪರ ಟಿ20ನಲ್ಲಿ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಲಿದ್ದಾರೆ. ಭುವನೇಶ್ವರ್ (90), ಯಜುವೇಂದ್ರ ಚಾಹಲ್ (96) ಮೊದಲೆರಡು ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net