ನೆದರ್ಲೆಂಡ್​ ವಿರುದ್ಧ ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು: ಟೀಮ್​ ಇಂಡಿಯಾದ ಸೆಮಿಫೈನಲ್​ ಎಂಟ್ರಿ ಖಚಿತ

Team India
Published on

ಅಡಿಲೇಡ್​: ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲೆಂಡ್​ ತಂಡ ಶಾಕ್​ ನೀಡಿದೆ. ಇಂದು ನಡೆದ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ನಿರ್ಣಾಯಕ ಪಂದ್ಯದಲ್ಲಿ ನೆದರ್ಲೆಂಡ್​ ವಿರುದ್ಧ ಸೋಲು ಅನುಭವಿಸುವ ಮೂಲಕ ದಕ್ಷಿಣ ಆಫ್ರಿಕಾದ ಸೆಮಿಫೈನಲ್​ ಕನಸು ಭಗ್ನಗೊಂಡಿದೆ. ಇತ್ತ ಹರಿಣಗಳ ಸೋಲು ಟೀಮ್​ ಇಂಡಿಯಾಗೆ ವರವಾಗಿದೆ. ಭಾರತ ಸಮಿಫೈನಲ್​ ಹಾದಿ ಸುಗಮವಾಗಿದೆ.

ಇಂದು ಅಡಿಲೇಡ್​ನ ಓವಲ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ನೆದರ್ಲೆಂಡ್,​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 158 ರನ್​ ಕಲೆಹಾಕಿತು. 159 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 145 ರನ್​ ಗಳಿಸಲಷ್ಟೇ ಶಕ್ತವಾಯಿತು. ಬಲಿಷ್ಠ ಆಫ್ರಿಕಾ ತಂಡ ದುರ್ಬಲ ನೆದರ್ಲೆಂಡ್​ ಎದುರು ಮಂಡಿಯೂರಿದ್ದು, ಕ್ರಿಕೆಟ್​ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ.

ಸದ್ಯ ಗ್ರೂಪ್​ 2ರಲ್ಲಿ ಭಾರತ ತಂಡ ಸಮೀಸ್​ ಪ್ರವೇಶ ಖಚಿತಪಡಿಸಿಕೊಂಡಿದೆ. ಗ್ರೂಪ್​ 2ರಲ್ಲಿ ಸಮೀಸ್​ಗೆ ಪ್ರವೇಶ ಪಡೆಯುವ ಮತ್ತೊಂದು ತಂಡ ಯಾವುದೆಂಬುದು ಇಂದೇ ನಿರ್ಧಾರವಾಗಲಿದೆ. ಸದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಗೆಲುವು ಸಾಧಿಸುವ ತಂಡ ಸಮೀಸ್​ ಪ್ರವೇಶಿಸಲಿದೆ. ಈ ಎರಡು ತಂಡಗಳು ಅಂಕಪಟ್ಟಿಯಲ್ಲಿ 4 ಅಂಕಗಳನ್ನು ಹೊಂದಿವೆ. ಪಟ್ಟಿಯಲ್ಲಿ 6 ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿದೆ. ಇಂದು ಭಾರತ ಜಿಂಬಾಬ್ವೆಯನ್ನು ಎದುರಿಸಲಿದೆ. ಮಧ್ಯಾಹ್ನ 1.30ಕ್ಕೆ ಮೆಲ್ಬೋರ್ನ್‌ನಲ್ಲಿ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡ 5 ಅಂಕಗಳನ್ನು ಹೊಂದಿತ್ತು. ಆದರೆ, ಇಂದಿನ ಸೋಲಿನಿಂದಾಗಿ ಟೂರ್ನಿಯಿಂದಲೇ ತಂಡ ಹೊರಬಿದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net