ಯುವತಿ ಮೇಲೆ ಆ್ಯಸಿಡ್​ ದಾಳಿ ಮಾಡಿದ್ದ ಆ್ಯಸಿಡ್​ ನಾಗನಿಗೆ ವಿಧಿಯಿಂದಲೇ ಘೋರ ಶಿಕ್ಷೆ! ನೋವಿನಿಂದ ನರಳಾಟ

acidnaga
Published on

ಬೆಂಗಳೂರು: ಪ್ರೀತಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಅಮಾಯಕ ಯುವತಿಯ ಮೇಲೆ ಆ್ಯಸಿಡ್​ ದಾಳಿ ಮಾಡಿ ಆಕೆಯ ಬದುಕನ್ನು ದುಃಖದ ಸಾಗರಕ್ಕೆ ದೂಡಿರುವ ಆ್ಯಸಿಡ್​ ನಾಗನಿಗೆ ವಿಧಿಯೇ ಘನ ಘೋರ ಶಿಕ್ಷೆಯನ್ನು ವಿಧಿಸಿದೆ. ಕರ್ಮದ ಫಲದಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪ್ರೀತಿಸಲು ಒಲ್ಲೆ ಎಂದ 24 ವರ್ಷದ ಯುವತಿ ಮೇಲೆ ಏ.28ರ ಗುರುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್​ ಆ್ಯಸಿಡ್​ ಹಾಕಿ ಪರಾರಿಯಾಗಿದ್ದ. ಈ ಘಟನೆ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು. ತುಂಬಾ ನೋವಿನಿಂದ ರಸ್ತೆಯಲ್ಲಿ ಬಿದ್ದು ನರಳಾಡಿದ ಯುವತಿಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸಾವು-ಬದುಕಿನ ನಡುವೆ ಹೋರಾಡಿದ ಯುವತಿ, ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾಳೆ.

ಆ್ಯಸಿಡ್​ ಎರಚಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡು 16 ದಿನಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಕಂಬಿ ಎಣಿಸುತ್ತಿರುವ ನಾಗೇಶನಿಗೆ ಇದೀಗ ವಿಧಿಯೇ ಘೋರ ಶಿಕ್ಷೆಯನ್ನು ನೀಡಿದೆ. ಆರೋಪಿ ನಾಗೇಶ್​ ಗ್ಯಾಂಗ್ರಿನ್​ ಕಾಯಿಲೆಯಿಂದ ಬಳಲುತ್ತಿದ್ದಾನೆ. ಗ್ಯಾಂಗ್ರಿನ್​ನಿಂದಾಗಿ ಕಾಣಿಸಿಕೊಂಡಿರುವ ನೋವಿನಿಂದ ವಿಲ ವಿಲ ಒದ್ದಾಡುತ್ತಿದ್ದಾನೆ. ತೀವ್ರ ನೋವು ಅನುಭವಿಸುತ್ತಿದ್ದು, ಇದೀಗ ಆತನಿಗೆ ಚಿಕಿತ್ಸೆ ಕೊಡಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net