ಇಂಗ್ಲೆಂಡ್ ಲೆಜೆಂಡ್ಸ್ ತಂಡದ ಎದುರು ಭಾರತ ಲೆಜೆಂಡ್ಸ್ ತಂಡಕ್ಕೆ ವೀರೋಚಿತ ಸೋಲು

india and england legends for web
Published on

ರಾಯ್‌ಪುರ: ಇರ್ಫಾನ್ ಪಠಾಣ್ (61*ರನ್, 34 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ಮನ್‌ಪ್ರೀತ್ ಗೂನಿ (35*ರನ್, 16 ಎಸೆತ, 1 ಬೌಂಡರಿ, 4 ಸಿಕ್ಸರ್) ಜೋಡಿ ಅಂತಿಮ ಹಂತದಲ್ಲಿ ಹೋರಾಡಿದರೂ ಭಾರತ ಲೆಜೆಂಡ್ಸ್ ತಂಡ ‘ರಸ್ತೆ ಸುರಕ್ಷತಾ ವರ್ಲ್ಡ್ ಸಿರೀಸ್ ಟಿ20’ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಲೆಜೆಂಡ್ಸ್ ತಂಡದ ಎದುರು 6 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಟೂರ್ನಿಯಲ್ಲಿ ಭಾರತ ಮೊದಲ ಸೋಲು ಕಂಡರೆ, ಇಂಗ್ಲೆಂಡ್ ಸತತ 2ನೇ ಜಯ ದಾಖಲಿಸಿತು.

ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, ನಾಯಕ ಕೆವಿನ್ ಪೀಟರ್ಸೆನ್ (75 ರನ್, 37 ಎಸೆತ, 6 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 188 ರನ್ ಪೇರಿಸಿದೆ. ಪ್ರತಿಯಾಗಿ ಭಾರತ ತಂಡ 7 ವಿಕೆಟ್‌ಗೆ 182 ರನ್ ಪೇರಿಸಲಷ್ಟೇ ಶಕ್ತವಾಯಿತು.

ಕೈಕೊಟ್ಟ ದಿಗ್ಗಜರು: ಬೃಹತ್ ಮೊತ್ತ ಬೆನ್ನಟ್ಟಿದ ಭಾರತಕ್ಕೆ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ (6) ಹಾಗೂ ಸಚಿನ್ ತೆಂಡುಲ್ಕರ್ (9) ಉತ್ತಮ ಆರಂಭ ನೀಡಲು ವಿಫಲರಾದರು. ಇಂಗ್ಲೆಂಡ್ ಬೌಲಿಂಗ್ ಎದುರು ಭಾರತ ಲೆಜೆಂಡ್ಸ್ ತಂಡದ ಅಗ್ರ ಕ್ರಮಾಂಕದ ದಿಢೀರ್ ಕುಸಿತ ಕಂಡಿತು. 56 ರನ್ ಪೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಕಡೇ ಹಂತದಲ್ಲಿ ಇರ್ಫಾನ್ ಪಠಾಣ್ ಹಾಗೂ ಮನ್‌ಪ್ರೀತ್ ಗೂನಿ ಜೋಡಿ 26 ಎಸೆತಗಳಲ್ಲಿ 63 ರನ್ ಪೇರಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ವಿಫಲವಾಯಿತು.

 18 ಎಸೆತಗಳಲ್ಲಿ ಕೆಪಿ ಅರ್ಧಶತಕ

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಕೆವಿನ್ ಪೀಟರ್ಸೆನ್ ಬಿರುಸಿನ ಆರಂಭ ನೀಡಿದರು. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ವೀಕ್ಷಕವಿವರಣೆಕಾರರಾಗಿ ಚಟುವಟಿಕೆಯಲ್ಲಿದ್ದ 40 ವರ್ಷದ ಕೆವಿನ್ ಪೀಟರ್ಸೆನ್ ಇನ್ನೂ ಬ್ಯಾಟಿಂಗ್ ಲಯ ಕಳೆದುಕೊಂಡಿಲ್ಲ. ಭಾರತ ವಿರುದ್ಧ 18 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ್ದು ಇದಕ್ಕೆ ಸಾಕ್ಷಿ. ಇದು ಟೂರ್ನಿಯಲ್ಲಿ ಅತಿವೇಗದ ಅರ್ಧಶತಕವೆನಿಸಿತು. ಪ್ರಮುಖವಾಗಿ ಸ್ಪಿನ್ನರ್ ಪ್ರಜ್ಞಾನ್ ಓಜಾರನ್ನು ಬೆಂಡೆತ್ತಿದರು. ಬಳಿಕ ಮಧ್ಯಮ ಕ್ರಮಾಂಕಕ್ಕೆ ಯೂಸುಫ್  ಪಠಾಣ್ ಕಡಿವಾಣ ಹೇರಿದರು. ಒಂದು ಹಂತದಲ್ಲಿ 12 ಓವರ್‌ಗಳಿಗೆ 2 ವಿಕೆಟ್‌ಗೆ 127 ರನ್ ಕಲೆಹಾಕಿದ್ದ ಇಂಗ್ಲೆಂಡ್ ಸುಲಭವಾಗಿ 200ರ ಗಡಿ ದಾಟುವ ಅವಕಾಶ ಹೊಂದಿತ್ತು. ಯೂಸುಫ್ ಪಠಾಣ್ ಮಾರಕ ದಾಳಿಯಿಂದ ಇಂಗ್ಲೆಂಡ್ ರನ್‌ವೇಗಕ್ಕೆ ಕಡಿವಾಣ ಹೇರುವಲ್ಲಿ ಪ್ರಮುಖ ಪಾತ್ರವಹಿಸಿದರು. ಇರ್ಫಾನ್ ಪಠಾಣ್ ಹಾಗೂ ಮುನಾಫ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.

ಇಂಗ್ಲೆಂಡ್ ಲೆಜೆಂಡ್ಸ್: 7 ವಿಕೆಟ್‌ಗೆ 188 (ಕೆವಿನ್ ಪೀಟರ್ಸೆನ್ 75, ಡರೇನ್ ಮ್ಯಾಡಿ 29, ಯೂಸುಫ್ ಪಠಾಣ್ 28ಕ್ಕೆ 3, ಇರ್ಫಾನ್ ಪಠಾಣ್ 28ಕ್ಕೆ 2, ಮುನಾಫ್ ಪಟೇಲ್ 30ಕ್ಕೆ 2). ಭಾರತ ಲೆಜೆಂಡ್ಸ್: 7 ವಿಕೆಟ್‌ಗೆ 182 (ವೀರೇಂದ್ರ ಸೆಹ್ವಾಗ್ 6, ಸಚಿನ್ ತೆಂಡುಲ್ಕರ್ 9, ಕೈಫ್ 1, ಯುವರಾಜ್ ಸಿಂಗ್ 20, ಯೂಸುಫ್ 17, ಇರ್ಫಾನ್ 61*,ಮನ್‌ಪ್ರೀತ್ ಗೂನಿ 35* ಪನೇಸರ್ 15ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net