

ಬೆಂಗಳೂರು: ಭಾರತ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಹಾಗೂ ಕ್ರೀಡಾ ವಿಶ್ಲೇಷಕಿ, ನಿರೂಪಕಿ ಸಂಜನಾ ಗಣೇಶನ್ ಜೋಡಿ ಮಾರ್ಚ್ 14 ಮತ್ತು 15 ರಂದು ಗೋವಾದಲ್ಲಿ ಹಸೆಮಣೆ ಏರಲಿದೆ ಎಂದು ವರದಿಯಾಗಿದೆ. ಈ ಮೂಲಕ ಬುಮ್ರಾ ಮದುವೆಯಾಗುವ ಹುಡುಗಿ ಕುರಿತು ಹಲವು ದಿನಗಳಿಂದ ಹರಿದಾಡುತ್ತಿದ್ದ ಗಾಳಿಗೆ ಸುದ್ದಿಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. 27 ವರ್ಷದ ಬುಮ್ರಾ ಮದುವೆ ಸಿದ್ಧತೆಗಾಗಿಯೇ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಬಿಡುವು ಪಡೆದಿದ್ದರು ಎನ್ನಲಾಗಿದೆ.
ಕ್ರೀಡಾ ವಾಹಿನಿ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನಿರೂಪಕಿಯಾಗಿರುವ ಸಂಜನಾ ಗಣೇಶನ್, 2014ರ ಮಿಸ್ ಇಂಡಿಯಾದ ಫೈನಲಿಸ್ಟ್ ಆಗಿದ್ದಾರೆ. 28 ವರ್ಷದ ಸಂಜನಾ, ಸ್ಟಾರ್ ಸ್ಪೋರ್ಟ್ಸ್ ಅಲ್ಲದೆ, ಹಲವು ಖಾಸಗಿ ಚಾನೆಲ್‌ಗಳಲ್ಲೂ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಐಪಿಎಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ತಜ್ಞರೊಂದಿಗೆ ವಿಶ್ಲೇಷಣೆ ಮಾಡಿ, ಮೈದಾನದಿಂದ ವರದಿ ಮಾಡಿದ್ದಾರೆ.