

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಆಟಗಾರನೊಬ್ಬನಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಆತಂಕ ಎದುರಾಗಿದೆ. ಕರೊನಾ ಸೋಂಕು ತಗುಲಿರುವ ಆಟಗಾರ ಕೌಂಟಿ ಚಾಂಪಿಯನ್ XI ಟೀಮ್ ವಿರುದ್ಧದ ಜುಲೈ 20ರಿಂದ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯದಿಂದ ಅಲಭ್ಯರಾಗಿದ್ದು, ಅವರ ದುರ್ಹಾಮ್ ಪ್ರವಾಸವನ್ನು ರದ್ದು ಮಾಡಲಾಗಿದೆ.
ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಸೋಲಿನ ನಂತರ ಭಾರತೀಯ ಕ್ರಿಕೆಟಿಗರು ಮೂರು ವಾರಗಳ ವಿರಾಮದಲ್ಲಿದ್ದರು. ಇತ್ತ ಡೆಲ್ಟಾ ಕರೊನಾ ರೂಪಾಂತರಿ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೇಯ್ ಷಾ ಅವರು ಕ್ರಿಕೆಟಿಗರು ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಆಟಗಾರರು ವಿಂಬಲ್ಡನ್ ಮತ್ತು ಯೂರೋ ಪಂದ್ಯಗಳನ್ನು ವೀಕ್ಷಿಸಿದ್ದರು. ಈ ವೇಳೆ ಜೇಯ್ ಷಾ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರು.
ಕಳೆದ ವಾರದ ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಾಲ್ವರು ಸಿಬ್ಬಂದಿ ಮತ್ತು ಮೂವರು ಆಟಗಾರರು ಸೇರಿದಂತೆ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದನ್ನು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ತಿಳಿಸಿತ್ತು. ಈ ಬೆಳವಣಿಗೆಯಿಂದಾಗಿ ಇಂಗ್ಲೆಂಡ್ ಏಕದಿನ ತಂಡವನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಬೆನ್ ಸ್ಟೋಕ್ಸ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು.
ಇದೀಗ್ ಟೀಮ್ ಇಂಡಿಯಾ ಕೂಡ ಇಂಗ್ಲೆಂಡ್ನಲ್ಲಿ ಬೀಡು ಬಿಟ್ಟಿದ್ದು, ಇದರ ನಡುವೆ ಓರ್ವ ಆಟಗಾರನಿಗೆ ಕೋವಿಡ್ ತಗುಲಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಉಳಿದ ಆಟಗಾರರನ್ನು ಸಹ ಕ್ವಾರಂಟೈನ್ನಲ್ಲಿ ಇಡಲಾಗಿದೆ. (ಏಜೆನ್ಸೀಸ್)