

ಬೆಂಗಳೂರು: ‘ಕೆಲವು ವರ್ಷಗಳ ಹಿಂದೆ ಪಾತ್ರಗಳ ಆಯ್ಕೆ ವಿಚಾರಗಳಲ್ಲಿ ತೃಪ್ತಿ ಇರಲಿಲ್ಲ. ಆಗಲೇ ನಿರ್ಧಾರ ಮಾಡಿದೆ. ಇನ್ನು ಮುಂದೆ ಆತ್ಮತೃಪ್ತಿಯಾಗುವಂತಹ ಪಾತ್ರಗಳನ್ನು ಮಾಡಬೇಕು ಎಂದು. ಆ ನಿರ್ಧಾರದ ನಂತರ ಬೇರೆ ಬೇರೆ ಪಾತ್ರಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ...’ ಹೀಗೆನ್ನುವ ಹರಿಪ್ರಿಯಾ, ‘ಲಗಾಮ್ನಲ್ಲಿ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ತಾಯಿ ಕಸ್ತೂರ್ಬಾ’ ಚಿತ್ರದಲ್ಲಿ ಮಹಾತ್ಮ ಗಾಂಧಿ ಅವರ ಪತ್ನಿ ಕಸ್ತೂರ್ಬಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ‘ಎವರು’ ಚಿತ್ರದ ರಿಮೇಕ್ನಲ್ಲಿ ಉದ್ಯಮಿಯಾಗಿ, ‘ಪೆಟ್ರೋಮ್ಯಾಕ್ಸ್’ನಲ್ಲಿ ಮತ್ತೊಂದು ವಿಶೇಷ ಪಾತ್ರ... ಹೀಗೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಗಳಿಂದಲೇ ಹೆಚ್ಚೆಚ್ಚು ತೃಪ್ತಿ ಸಿಗುತ್ತಿದೆ ಎನ್ನುತ್ತಾರವರು.
ಸದ್ಯ, ‘ಲಗಾಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವ ಹರಿಪ್ರಿಯಾ’, ‘ತಾಯಿ ಕಸ್ತೂರ್ಬಾ’ ಚಿತ್ರವನ್ನೂ ಅರ್ಧ ಮುಗಿಸಿದ್ದಾರೆ. ‘ನಾನು ಇದುವರೆಗೂ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಪತ್ರಕರ್ತರು ಹೇಗೆ ಕೆಲಸ ಮಾಡುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸಿ ನಟಿಸುತ್ತಿದ್ದೇನೆ. ಇನ್ನು, ಕಸ್ತೂರ್ಬಾ ಗಾಂಧಿ ಎಲ್ಲರಿಗೂ ಗೊತ್ತು. ಆದರೆ, ಅವರನ್ನು ನಾವು ಹೆಚ್ಚು ನೋಡಿಲ್ಲ. ಗಾಂಧಿ ಬಗ್ಗೆ ಗೊತ್ತಿರುವಷ್ಟು, ಕಸ್ತೂರ್ಬಾ ಅವರ ಬಗ್ಗೆ ಗೊತ್ತಿಲ್ಲ. ಈ ವಿಷಯದಲ್ಲಿ ಬರಗೂರರು ನನಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಅವರಿಂದ ಕಲಿತು ಈ ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಹರಿಪ್ರಿಯಾ.