ಭಾರತಕ್ಕೆ ಟಿ20, ಏಕದಿನ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ!

world no. 1 web
Published on

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತ ಬಳಿಕ ಸತತ 3 ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಂಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶ ಮತ್ತು ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ತ್ರಿವಿಕ್ರಮ ಸಾಧನೆ ಮಾಡಿರುವ ಭಾರತ ತಂಡಕ್ಕೆ ಮುಂಬರುವ ಸೀಮಿತ ಓವರ್ ಸರಣಿಯಲ್ಲೂ ವಿಶ್ವ ನಂ. 1 ಪಟ್ಟದ ಅವಕಾಶ ಎದುರಾಗಿದೆ. ಟಿ20 ಮತ್ತು ಏಕದಿನ ಸರಣಿಯಲ್ಲೂ ಗೆಲುವಿನ ಓಟ ಮುಂದುವರಿಸಿದರೆ ಭಾರತ ತಂಡ ಏಕಕಾಲದಲ್ಲಿ ಐಸಿಸಿಯ ಮೂರೂ ಪ್ರಕಾರದ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅಪರೂಪದ ಸಾಧನೆ ಮಾಡಲಿದೆ.

ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಸದ್ಯ ಭಾರತ ತಂಡ 268 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ 275 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಶುಕ್ರವಾರದಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 4-1ರಿಂದ ಜಯಿಸಿದರೆ, 272 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಇಂಗ್ಲೆಂಡ್ ಅಂಕ 269ಕ್ಕೆ ಕುಸಿಯಲಿದ್ದು, 2ನೇ ಸ್ಥಾನಕ್ಕಿಳಿಯಲಿದೆ. ಭಾರತ ಕ್ಲೀನ್‌ಸ್ವೀಪ್ ಸಾಧಿಸಿದರೆ 274 ಅಂಕದೊಂದಿಗೆ ಅಗ್ರಸ್ಥಾನ ಮತ್ತಷ್ಟು ಭದ್ರವಾಗಲಿದೆ. ಭಾರತ 3-2ರಿಂದ ಸರಣಿ ಜಯಿಸಿದರೂ, 272 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಉಳಿಯಬೇಕಾಗುತ್ತದೆ. ಭಾರತ 2-3ರಿಂದ ಸರಣಿ ಸೋತರೆ ಅಂಕ ಮತ್ತು ಸ್ಥಾನದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಭಾರತ 1-4ರಿಂದ ಸರಣಿ ಸೋತರೆ 3ನೇ ಸ್ಥಾನಕ್ಕೆ ಕುಸಿತ ಕಾಣಬೇಕಾಗುತ್ತದೆ.

ಏಕದಿನದಲ್ಲಿ ಕ್ಲೀನ್‌ಸ್ವೀಪ್ ಅಗತ್ಯ

ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ಸದ್ಯ ಭಾರತ ತಂಡ 117 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 123 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಮಾರ್ಚ್ 23ರಿಂದ ಪುಣೆಯಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದರೆ ಭಾರತ ನಂ. 1 ಪಟ್ಟಕ್ಕೇರಲಿದೆ. ಭಾರತ 3-0ಯಿಂದ ಗೆದ್ದರೆ ಅಂಕ ಗಳಿಕೆ 120ಕ್ಕೇರಲಿದ್ದು, ಇಂಗ್ಲೆಂಡ್ ತಂಡದ ಅಂಕ 119ಕ್ಕೆ ಕುಸಿಯಲಿದೆ. ಭಾರತ 2-1ರಿಂದ ಸರಣಿ ಗೆದ್ದರೂ 2ನೇ ಸ್ಥಾನದಲ್ಲೇ ಉಳಿಯಲಿದ್ದು, ಇಂಗ್ಲೆಂಡ್ ಕೂಡ 2 ಅಂಕ ನಷ್ಟದ ನಡುವೆ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಭಾರತ ವೈಟ್‌ವಾಷ್ ಎದುರಿಸಿದರೆ 3ನೇ ಸ್ಥಾನಕ್ಕೆ ಕುಸಿಯಲಿದೆ.

3ನೇ ಸ್ಥಾನಕ್ಕಿಳಿದ ಕೆಎಲ್ ರಾಹುಲ್

ಕನ್ನಡಿಗ ಕೆಎಲ್ ರಾಹುಲ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ 2ರಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಆಸ್ಟ್ರೇಲಿಯಾದ ನಾಯಕ ಆರನ್ ಫಿಂಚ್ 2ನೇ ಸ್ಥಾನಕ್ಕೇರಿದ್ದರೆ, ಇಂಗ್ಲೆಂಡ್‌ನ ಡೇವಿಡ್ ಮಲಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ರ‌್ಯಾಂಕಿಂಗ್‌ನ ಅಗ್ರ 10ರೊಳಗಿರುವ ಮತ್ತೋರ್ವ ಭಾರತೀಯರಾಗಿದ್ದು, 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನ ಅಗ್ರ 10ರೊಳಗೆ ಭಾರತದ ಯಾವ ಬೌಲರ್ ಕೂಡ ಸ್ಥಾನ ಪಡೆದಿಲ್ಲ.

ಪಂತ್‌ಗೆ ಜೀವನಶ್ರೇಷ್ಠ 7ನೇ ಸ್ಥಾನ

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 7ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಪಂತ್ 7 ಸ್ಥಾನ ಜಿಗಿತ ಕಂಡಿದ್ದು, ರೋಹಿತ್ ಶರ್ಮ ಜತೆಗೆ 7ನೇ ಸ್ಥಾನ ಹಂಚಿಕೊಂಡಿದ್ದಾರೆ. ಕೊಹ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಆರ್. ಅಶ್ವಿನ್ 2ನೇ ಸ್ಥಾನಕ್ಕೇರಿದ್ದರೆ, ಅಕ್ಷರ್ ಪಟೇಲ್ 30ನೇ ಸ್ಥಾನಕ್ಕೇರಿದ್ದಾರೆ. ಮದುವೆ ಸಿದ್ಧತೆಗಾಗಿ ಬಿಡುವು ಪಡೆದಿರುವ ವೇಗಿ ಜಸ್‌ಪ್ರೀತ್ ಬುಮ್ರಾ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net