

ಅಹಮದಬಾದ್: ಕ್ರಿಕೆಟ್ ಏಕದಿನ ವಿಶ್ವಕಪ್ 2023ರ ಪಂದ್ಯಗಳಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಅಹಮದಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಪಂದ್ಯ ಪ್ರಾರಂಭಿಸಿದ ಭಾರತ ಜಯಭೇರಿಯಾಗುವ ಮೂಲಕ ಪಂದ್ಯವನ್ನು ಮುಗಿಸಿತು. ಈ ಸಂಭ್ರಮದ ಛೌಯೆ ಮಕ್ಕಳಲ್ಲಿ ಕಂಡುಬಂದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣುವಂತೆ ಒಂದು ಟೆಂಟ್ನ ಅಡಿ ಕುಳಿತು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತಿದ್ದ ಜನರ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಕೇಸರಿ ಟೋಪಿ, ತ್ರಿವರ್ಣ ಧ್ವಜ ಹಿಡಿದು ಪಂದ್ಯ ವೀಕ್ಷಣೆ ಮಾಡುತ್ತಿದ್ದ ಪುಟ್ಟ ಪೋರರು ಭಾರತ ತಂಡ ಗೆಲುವಿನ ಪತಾಕೆ ಹಾರಿಸುತ್ತಿದ್ದಂತೆ ಕುಳಿತ ಜಾಗದಿಂದ ಎದ್ದು ಭಾವುಟ ಹಾರಿಸಿ, ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೊಲ್ಟೇಜ್ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಏಳು ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು 8ನೇ ಬಾರಿಗೆ ಮಣಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿನ ಗೆಲುವಿನಿಂದಾಗಿ ಭಾರತ ಅಂಕಪಟ್ಟಿಯಲ್ಲಿ ಈಗ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದ ಟೀಂ ಇಂಡಿಯಾ, ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 42.5 ಓವರ್ಗಳಲ್ಲಿ 191ಕ್ಕೆ ಆಲೌಟ್ ಮಾಡಿದ್ದರು. ಭಾರತದ ಪರ ಜಸ್ಪ್ರೀತ್ ಬುಮ್ರಾ (7-1-19-2), ಮೊಹಮ್ಮದ್ ಸಿರಾಜ್ (8-0-50-2), ಹಾರ್ದಿಕ್ ಪಾಂಡ್ಯ (6-0-34-2), ಕುಲದೀಪ್ ಯಾದವ್ (10-0-35-2), ರವೀಂದ್ರ ಜಡೇಜಾ (9.5-0-38-2), ಶಾರ್ದೂಲ್ ಠಾಕೂರ್ (2-0-12-0) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
192 ರನ್ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ರೋಹಿತ್ ಶರ್ಮಾ (86 ರನ್, 63 ಎಸೆತ, 6 ಬೌಂಡರಿ, 6 ಸಿಕ್ಸರ್), ಶ್ರೇಯಸ್ ಅಯ್ಯರ್ (53 ರನ್, 62 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಸುಲಭ ಗುರಿಯನ್ನು 30.3 ಒವರ್ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.