More

    ಬಿಜೆಪಿ ಜತೆ ಸೀಟು ಹಂಚಿಕೆ; ಅ.21 ರಂದು ಜೆಡಿಎಸ್ ವರಿಷ್ಠರು ದೆಹಲಿಗೆ ಪ್ರಯಾಣ

    ಬೆಂಗಳೂರು: ಬಿಜೆಪಿ ಮೈತ್ರಿ ಖಾತ್ರಿಯಾದ ಬೆನ್ನಲ್ಲೇ ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಪಕ್ಷದ ಹಲವು ನಾಯಕರು, ಅಲ್ಪಸಂಖ್ಯಾತ ಮುಖಂಡರು ಮೈತ್ರಿಗೆ ಅಪಸ್ವರ ವ್ಯಕ್ತಪಡಿಸಿದ್ದರೂ ಜೆಡಿಎಸ್ ವರಿಷ್ಠರು ಅದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

    ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ ಹೈ ಕಮಾಂಡ್ ಜತೆ ಚರ್ಚಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅ.21 ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

    ಜೆಡಿಎಸ್ ಪ್ರಬಲವಾಗಿರುವ ಕಡೆಗಳಲ್ಲಿ ಮಾತ್ರ ಸೀಟು ಕೇಳುವುದಾಗಿ ಈಗಾಗಲೇ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದು, ಐದು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳುವ ಸಾಧ್ಯತೆಗಳಿವೆ.
    ಮಂಡ್ಯ, ಮೈಸೂರು, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಡುವ ಸಾಧ್ಯತೆಗಳಿವೆ.

    ಮಂಡ್ಯ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು

    ಹಾಸನ ಜೆಡಿಎಸ್ ಹಿಡಿತದಲ್ಲಿದೆ. ಉಳಿದಂತೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚು ಪ್ರಾಬಲ್ಯ ಹೊಂದಿದೆ. ಆದರೆ, 2019ರ ಚುನಾವಣೆಯಲ್ಲಿ ನಟಿ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರವನ್ನು ಮರಳಿ ಪಡೆಯಲು ಜೆಡಿಎಸ್ ತುದಿಗಾಲ ಮೇಲೆ ನಿಂತಿದೆ.

    ನಿಖಿಲ್ ಸ್ಪರ್ಧೆ ಬಹುತೇಕ ನಿಶ್ಚಿತ

    ಮೈತ್ರಿ ವಿಚಾರ ಕುರಿತು ಚರ್ಚಿಸುವ ವೇಳೆ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದೊಯ್ದದ್ದು ಹಲವು ಅನುಮಾನ ಮೂಡಿಸಿದೆ. ಮೈತ್ರಿಗೆ ಗ್ರೀನ್ ಸಿಗ್ನಲ್ ಸಿಗುತ್ತಲೇ ನಿಖಿಲ್ ಕುಮಾರಸ್ವಾಮಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರುವುದು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ಮುನ್ಸೂಚನೆಗಳಾಗಿವೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತದೆ.

    ಸುಮಲತಾ ನಡೆ ನಿಗೂಢ

    2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿರುವ ಸುಮಲತಾ ಅಂಬರೀಶ್ ವಿಚಾರದಲ್ಲಿ ಬಿಜೆಪಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿಡಿಯುವುದು ನಿಶ್ಚಿತವಾಗಿರುವುದದರಿಂದ ಸುಮಲತಾ ಅಂಬರೀಶ್ ಮುಂದಿನ ನಡೆ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts