

IND vs PAK: ಇಂದು ಮಧ್ಯಾಹ್ನ 2:30ರಿಂದ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಶುರುವಾಗಲಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನತ್ತ ಜಮಾಯಿಸಿದ್ದಾರೆ. ಟೀಮ್ ಇಂಡಿಯಾ ಮತ್ತು ಪಾಕ್ ನಡುವಿನ ಭಾರೀ ಜಿದ್ದಾಜಿದ್ದಿಗೆ ಕ್ಷಣಗಣನೆ ಆರಂಭಗೊಂಡಿದೆ. ಎರಡು ದೇಶಗಳ ಅಭಿಮಾನಿಗಳಲ್ಲಿ ತೀವ್ರ ಕುತೂಹಲ, ಕಾತರತೆ ಹೆಚ್ಚಾಗಿದೆ.
ಇಂದಿನ ರೋಚಕ ಪಂದ್ಯ ಎಂದೇ ಹೇಳಲಾಗುತ್ತಿರುವ ಪಾಕ್ ಮತ್ತು ಭಾರತದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಲಿದೆ ಎಂಬ ಅಪಾರ ಭರವಸೆ, ನಿರೀಕ್ಷೆಗಳು ವ್ಯಕ್ತವಾಗಿವೆ. ಇನ್ನು ಈ ಕದನ ಕುರಿತು ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಟೀಮ್ ಇಂಡಿಯಾದ ದಿಗ್ಗಜ, ಮಾಜಿ ಹಿರಿಯ ಆಟಗಾರ ಸುನಿಲ್ ಗವಾಸ್ಕರ್," ಪಾಕಿಸ್ತಾನ ಎದುರು ಭಾರತ ಉತ್ತಮವಾಗಿ ಆಡಲಿದೆ. ನಮ್ಮ ಬ್ಯಾಟರ್ಗಳ ಮೇಲೆ ಪಾಕಿಸ್ತಾನ ಬೌಲರ್ಗಳ ಒತ್ತಡ ಬೀರುವುದಿಲ್ಲ. ಆದರೆ, ಆರಂಭಿಕ ಬ್ಯಾಟರ್ಗಳ ಪ್ರದರ್ಶನ ಇಲ್ಲಿ ಬಹಳ ಮುಖ್ಯವಾಗಿದೆ" ಎಂದಿದ್ದಾರೆ.
"ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಯಾವುದೇ ಕಾರಣಕ್ಕೂ ಸುಲಭವಾಗಿ ವಿಕೆಟ್ ಒಪ್ಪಿಸಬಾರದು. ಒಪ್ಪಿಸಿದರೆ, ಆರಂಭದಲ್ಲೇ ತಂಡದ ಮೇಲೆ ಕೊಂಚ ಒತ್ತಡ ಶುರುವಾಗುತ್ತದೆ. ಆದರೆ, ಅಂತಹ ಪರಿಣಾಮ ಬೀರುವುದಿಲ್ಲ. ಸಮಸ್ಯೆಯೂ ಆಗುವುದಿಲ್ಲ. ಕಾರಣ, ನಮ್ಮಲ್ಲಿ ಉತ್ತಮ ಬ್ಯಾಟರ್ಗಳು ಮತ್ತು ಆಲ್ರೌಂಡರ್ಗಳು ಇದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ, ನಾಲ್ಕು, ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡುವ ಆಟಗಾರರು ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದ್ದೇವೆ. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ರನ್ ಗಳಿಸುವ ಕೌಶಲ್ಯ ಮತ್ತು ಪ್ರತಿಭೆಯನ್ನು ಹೊಂದಿದ್ದಾರೆ. ಹೀಗಿರುವಾಗ ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಹ ಸಮಸ್ಯೆ ಏನು ಕಾಡುವುದಿಲ್ಲ" ಎಂದರು.
"ತಂಡದ ಪರ ಓಪನಿಂಗ್ ಇಳಿಯುವ ರೋಹಿತ್ ಮತ್ತು ಶುಭಮನ್ ಗಿಲ್ ಉತ್ತಮ ಸ್ಟಾರ್ಟ್ ಕೊಡಬೇಕು. ಅವರಿಬ್ಬರಿಂದ ಸ್ಫೋಟಕ ಇನ್ನಿಂಗ್ಸ್ ಬರಬೇಕು ಎಂಬುದು ಎಲ್ಲರ ನಿರೀಕ್ಷೆ. ಹಾರ್ದಿಕ್ ಪಾಂಡ್ಯ ಒಬ್ಬ ಪವರ್ಫುಲ್ ಹಿಟ್ಟರ್. ಇನ್ನು ಅಕ್ಷರ್ ಮತ್ತು ಜಡೇಜಾ ತಾಂತ್ರಿಕವಾಗಿ ಉತ್ತಮರು. ಈ ಹಿಂದೆ, ಭಾರತ 6ನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್‌ಮನ್ ಹೊಂದಿರಲಿಲ್ಲ. ಆರಂಭಿಕ ಆಟಗಾರರು ಬಹುಬೇಗ ಔಟ್ ಆದರೆ, ಅದು ತಂಡದ ಮೇಲೆ ಭಾರೀ ಪ್ರಭಾವ ಬೀರುತ್ತಿತ್ತು. ಆದ್ರೆ, ಈಗ ಆ ಚಿಂತೆ ಇಲ್ಲ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ,(ಏಜೆನ್ಸೀಸ್).