

IND Vs PAK : ಪಾಕಿಸ್ತಾನ ಎಂದರೆ ಮೊದಲು ನೆನಪಾಗುವುದೇ ಭಯೋತ್ಪಾದನೆ. ಉಗ್ರರ ನಾಡು ಎಂದೇ ಪಾಕ್ ಜನಜನಿತ. ಅಲ್ಲಿ ಮದ್ದು-ಗುಂಡುಗಳ ಶಬ್ಧ ಸಾಮಾನ್ಯ. ಬಂದೂಕುಗಳಂತೂ ಆಟಿಕೆ ವಸ್ತುಗಳಂತಿವೆ. ರಕ್ತಪಾತವೂ ಸಹಜ ಎನ್ನುವಂತಿದೆ. ಉಗ್ರವಾದದಿಂದಲೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನದ ಬಹುತೇಕ ಮಂದಿಯ ಮನಸ್ಥಿತಿಯು ಕೂಡ ಅದೇ ರೀತಿ ಇದೆ. ಅದಕ್ಕೆ ತಾಜಾ ಉದಾಹರಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪಾಕ್ ಆಟಗಾರನ ಅನುಚಿತ ವರ್ತನೆ ಎಂದು ಹೇಳಬಹುದು.
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕ್ ಪಂದ್ಯಗಳು ಹೆಚ್ಚು ಗಮನ ಸೆಳೆದಿವೆ. ಅಲ್ಲದೆ, ವಿವಾದಗಳು ಕೂಡ ಹೆಚ್ಚಾಗಿ ಸದ್ದು ಮಾಡುತ್ತಿವೆ. ಲೀಗ್ ಹಂತದಲ್ಲಿ ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರು ಪಂದ್ಯದ ಬಳಿಕ ಕೈಕುಲುಕದೇ ಇದ್ದಿದ್ದು ಈ ಹಿಂದೆ ವಿವಾದವಾಯಿತು. ಟೂರ್ನಿಯನ್ನು ಬಹಿಷ್ಕಾರ ಮಾಡುವ ಬೆದರಿಕೆಯನ್ನು ಸಹ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಕಿತ್ತು. ಆದರೆ, ಬಿಸಿಸಿಐ ನಿಲುವಿಗೆ ಹೆದರಿ ಯೂಟರ್ನ್ ಹೊಡೆಯಿತು.
ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರವನ್ನು ಪ್ರಸ್ತಾಪಿಸಿ ಕ್ರೀಡೆಯನ್ನು ರಾಜಕೀಯಗೊಳಿಸಬೇಡಿ ಎಂದು ಬೊಬ್ಬೆ ಹೊಡೆಯುವ ಪಾಕಿಸ್ತಾನ ತನ್ನ ನರಿಬುದ್ದಿಯನ್ನು ಮಾತ್ರ ಬಿಟ್ಟಿಲ್ಲ. ಹೇಳುವುದು ವೇದಾಂತ ತಿನ್ನುವುದು ಬದನೇಕಾಯಿ ಎಂಬಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ. ಪಾಕ್ ಹಿರಿಯ ಆಟಗಾರರು ಕ್ರೀಡೆಯನ್ನು ರಾಜಕೀಯಗೊಳಿಸಬೇಡಿ ಎನ್ನುತ್ತಾರೆ. ಆದರೆ, ಅದೇ ಪಾಕ್ ಆಟಗಾರರು ಮೈದಾನದಲ್ಲಿ ಪ್ರಚೋದನಾಕಾರಿ ಸನ್ನೆಗಳನ್ನು ಮಾಡುತ್ತಾರೆ. ಈ ಒಂದು ನಡೆ ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಭಾನುವಾರ (ಸೆ.21) ಭಾರತ ವಿರುದ್ಧ ನಡೆದ ಸೂಪರ್-4 ಪಂದ್ಯದಲ್ಲಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಂತರ ಸಾಹಿಬ್‌ಜಾದಾ ಫರ್ಹಾನ್ ಎಕೆ-47 ಬಂದೂಕಿನಂತೆ ತನ್ನ ಬ್ಯಾಟ್ ಅನ್ನು ಎತ್ತಿ ಸ್ಫೋಟಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಈ ಉದ್ದೇಶಪೂರ್ವಕ ಸನ್ನೆ ಪಾಕ್ ಮಂದಿಯ ಮನಸ್ಥಿತಿಯನ್ನು ತೋರಿಸಿದೆ. ಮದ್ದು ಗುಂಡು, ಹಿಂಸೆಯೇ ಪಾಕಿಸ್ತಾನದ ಜೀವಾಳ ಎಂಬುದನ್ನು ಫರ್ಹಾನ್ ತಮ್ಮ ಸಂಭ್ರಮಾಚರಣೆ ಮೂಲಕ ಜಗಜ್ಜಾಹೀರು ಮಾಡಿದ್ದಾರೆ. ಅಲ್ಲದೆ, ಪಾಕಿಗಳ ಈ ಮನಸ್ಥಿತಿ ಎಂದಿಗೂ ಬದಲಾಗಲ್ಲ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ (ಸೆ.21) ನಡೆದ ಏಷ್ಯಾಕಪ್ 2025ರ ಸೂಪರ್-4 ಹಂತದ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನವನ್ನು ಮಣಿಸಿತು. ಈ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು. 19 ನೇ ಓವರ್‌ನಲ್ಲಿ ತಿಲಕ್ ವರ್ಮಾ ಶಾಹೀನ್ ಅಫ್ರಿದಿ ಎಸೆತದಲ್ಲಿ ಸಿಕ್ಸರ್ ಮತ್ತು ನಂತರ ಬೌಂಡರಿ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಅವರು 19 ಎಸೆತಗಳಲ್ಲಿ 30 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. (ಏಜೆನ್ಸೀಸ್)