ರನ್ನರ್​ ಅಪ್​ ಚೆಕ್ ತೆಗೆದುಕೊಂಡು ಎಲ್ಲರ ಮುಂದೆಯೇ​ ಎಸೆದು ಹೋದ ಪಾಕ್​ ನಾಯಕ ಸಲ್ಮಾನ್! ವಿಡಿಯೋ ವೈರಲ್​... Salman Ali Agha ​

Salman Ali Agha
Published on

Salman Ali Agha : ನಿನ್ನೆಯಷ್ಟೇ (ಸೆ.28) ಮುಕ್ತಾಯಗೊಂಡ ಪ್ರತಿಷ್ಠಿತ ಏಷ್ಯಾಕಪ್‌ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಅಭೂತಪೂರ್ವ ಗೆಲುವು ದಾಖಲಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ನೇತೃತ್ವದ ಭಾರತ ತಂಡ, ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು.

ಈ ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅನುಚಿತವಾಗಿ ವರ್ತಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಾಕ್​ ನಾಯಕನ ವರ್ತನೆಯನ್ನು ಖಂಡಿಸಿ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ (38 ಎಸೆತಗಳಲ್ಲಿ 57 ರನ್) ಮತ್ತು ಫಖರ್ ಜಮಾನ್ (35 ಎಸೆತಗಳಲ್ಲಿ 46 ರನ್) ಅತ್ಯುತ್ತಮ ಸ್ಕೋರರ್ ಎನಿಸಿಕೊಂಡರು. ಟೀಮ್ ಇಂಡಿಯಾ ಪರ ಕುಲದೀಪ್ ಯಾದವ್ ನಾಲ್ಕು ವಿಕೆಟ್ ಪಡೆದರೆ, ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.

ಬಳಿಕ ಟೀಮ್​ ಇಂಡಿಯಾ 147 ರನ್​ಗಳ ಗುರಿಯನ್ನು 19.4 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ತಲುಪಿತು. ಭಾರತದ ಬ್ಯಾಟ್ಸ್​ಮನ್​ಗಳಲ್ಲಿ ತಿಲಕ್ ವರ್ಮ (53 ಎಸೆತಗಳಲ್ಲಿ 69 ರನ್) ಅರ್ಧಶತಕ ಗಳಿಸಿದರು. ಶಿವಂ ದುಬೆ (33) ಮತ್ತು ಸಂಜು ಸ್ಯಾಮ್ಸನ್ (24) ಉಪಯುಕ್ತ ರನ್​ ಕಾಣಿಕೆ ನೀಡಿದರು. ಪಾಕಿಸ್ತಾನದ ಬೌಲರ್ ಗಳಲ್ಲಿ ಫಹೀಮ್ ಅಶ್ರಫ್ ಮೂರು ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ ಮತ್ತು ಅಬ್ರಾರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಕ್ತಾರ ಅಮೀನುಲ್ ಇಸ್ಲಾಂ ಅವರಿಂದ ರನ್ನರ್ ಅಪ್ ಚೆಕ್ ಪಡೆದ ನಂತರ ಸಲ್ಮಾನ್ ಅಲಿ ಆಘಾ ಹತಾಶೆಯಿಂದ ಅದನ್ನು ಪಕ್ಕಕ್ಕೆ ಎಸೆದು, ಅಲ್ಲಿಂದ ಹೊರಟು ಹೋದರು. ಸಲ್ಮಾನ್​ ಅವರ ಮುಖದಲ್ಲಿ ಸೋಲಿನ ಹತಾಶೆ ಎದ್ದು ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಸಲ್ಮಾನ್​ ವರ್ತನೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಇನ್ನು ಫೈನಲ್‌ನಲ್ಲಿ ತಮ್ಮ ತಂಡದ ಸೋಲಿಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್​, ಈ ಸೋಲು ನಮ್ಮ ನಿರಾಶೆಗೊಳಿಸಿದೆ. ಇದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದರು. ಬ್ಯಾಟಿಂಗ್‌ನಲ್ಲಿ ನಮ್ಮ ವೈಫಲ್ಯವೇ ಈ ಸೋಲಿಗೆ ಮುಖ್ಯ ಕಾರಣ. ಆದಾಗ್ಯೂ, ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಇನ್ನೂ 15 ರಿಂದ 20 ರನ್ ಗಳಿಸಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net