

IND vs PAK Final: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿ ಅಂತಿಮ ಘಟ್ಟವನ್ನು ತಲುಪಿದ್ದು, ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಮೂರನೇ ಬಾರಿಗೆ ಪಾಕ್ ತಂಡವನ್ನು ಎದುರಿಸಲಿರುವ ಟೀಮ್ ಇಂಡಿಯಾ, ಸತತ ಮೂರನೇ ಬಾರಿಯೂ ಪಾಕ್ನ ಬಗ್ಗುಬಡಿಯಲು ಎದುರುನೋಡುತ್ತಿದೆ. ಇದು ಅಪಾರ ಸಂಖ್ಯೆಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮಹದಾಸೆಯಾಗಿದೆ. ಈ ಮಧ್ಯೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ.
ಇದೇ ಭಾನುವಾರ ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ಕೋಚ್ ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದು, ತಂಡದ ಸ್ಟಾರ್ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಗಾಯದಿಂದ ಬಳಲುತ್ತಿದ್ದಾರೆ ಎಂಬ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಶುಕ್ರವಾರ (ಸೆ.26) ಸೂಪರ್-4ರ ಭಾಗವಾಗಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಆದರೆ, ಪಂದ್ಯದ ವೇಳೆ ಗಾಯಗೊಂಡ ಅಭಿಷೇಕ್ ಶರ್ಮ, ಫೀಲ್ಡಿಂಗ್ಗೆ ಬರಲಿಲ್ಲ. ಮತ್ತೊಂದೆಡೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ನ ಮೊದಲ ಓವರ್ ಬೌಲಿಂಗ್ ಮಾಡಿದ ಬಳಿಕ ಮೈದಾನವನ್ನು ತೊರೆದರು. ಇದು ಹಲವರ ಗೊಂದಲಕ್ಕೆ ಕಾರಣವಾಯಿತು.
ಈ ಇಬ್ಬರು ಸ್ಟಾರ್ ಕ್ರಿಕೆಟಿಗರು, ಪಂದ್ಯದಲ್ಲಿ ಮತ್ತೆ ಕಾಣಿಸಿಕೊಳ್ಳದೆ ಹೋಗಿದ್ದು ಹಲವು ಪ್ರಶ್ನೆಗಳು ಮುನ್ನೆಲೆಗೆ ಬರುವಂತೆ ಮಾಡಿತು. ಈ ಕುರಿತು ಪ್ರತಿಕ್ರಿಯಿಸಿದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, "ಇಬ್ಬರೂ ನೋವಿನಿಂದ ಬಳಲುತ್ತಿದ್ದಾರೆ. ಪ್ರಸ್ತುತ, ಅಭಿಷೇಕ್ ಸುಧಾರಿಸಿಕೊಂಡಿದ್ದು, ಓಕೆ ಎಂಬಂತೆ ಕಂಡಿದ್ದಾರೆ. ಆದರೆ, ಹಾರ್ದಿಕ್ ವಿಚಾರದಲ್ಲಿ ಸ್ವಲ್ಪ ಕಾದು ನೋಡಬೇಕು. ಇಂದು ಸಂಜೆಯವರೆಗೆ ನೋಡಿ, ಆಡಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ" ಎಂದಿದ್ದಾರೆ.
ಇನ್ನು ಪಂದ್ಯಕ್ಕೆ ಬಂದರೆ, ಅಭಿಷೇಕ್ ಶರ್ಮಾ (61 ರನ್; 8 ಬೌಂಡರಿ, 31 ಎಸೆತ, 2 ಸಿಕ್ಸರ್), ತಿಲಕ್ ವರ್ಮಾ (ಅಜೇಯ 49, 4 ಬೌಂಡರಿ, 34 ಎಸೆತ, 1 ಸಿಕ್ಸರ್) ಮತ್ತು ಸಂಜು ಸ್ಯಾಮ್ಸನ್ (39 ರನ್, 23 ಎಸೆತ, 1 ಬೌಂಡರಿ, 3 ಸಿಕ್ಸರ್) ಉತ್ತಮ ಬ್ಯಾಟಿಂಗ್ ಕೊಡುಗೆ ನೀಡಿದರು. ಮೊದಲು ಬ್ಯಾಟ್ ಮಾಡಿದ ಭಾರತ, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಈ ಗುರಿಯನ್ನು ಸೂಪರ್ ಓವರ್ಗೆ ತೆಗೆದುಕೊಂಡು ಹೋದ ಲಂಕಾ ಪಡೆ, ಭಾರತ ಎದುರು ಕಡೆಗೂ ಮಂಡಿಯೂರಿತು.