ಪಾಕ್​ನೊಂದಿಗಿನ ಕದನ ವಿರಾಮದಲ್ಲಿ ಮೂರನೇ ವ್ಯಕ್ತಿಯ ಪಾತ್ರವಿಲ್ಲ: ಟ್ರಂಪ್​ಗೆ​ ಪರೋಕ್ಷವಾಗಿ ತಿರುಗೇಟು ಕೊಟ್ಟ ಭಾರತ | Ceasefire

Donald Trump
Published on

Ceasefire: ಪಾಕಿಸ್ತಾನದೊಂದಿಗಿನ ಕದನ ವಿರಾಮದಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಭಾರತ ಪುನರ್​​ ಉಚ್ಚರಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಪಾಕಿಸ್ತಾನದ ಸೇನೆಯು ದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿತು ಎಂದು ಭಾರತ ಹೇಳಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಭಾರತದ ಶಾಶ್ವತ ನಿಯೋಗದ ಮೊದಲ ಕಾರ್ಯದರ್ಶಿ ಪೆಟಲ್ ಗಹ್ಲೋಟ್, ಈ ಸಭೆಯು ಪಾಕಿಸ್ತಾನದ ಪ್ರಧಾನ ಮಂತ್ರಿಯಿಂದ ನಾಟಕೀಯ ಭಾಷಣಗಳಿಗೆ ಸಾಕ್ಷಿಯಾಗಿದೆ. ಪಾಕ್​ ಮತ್ತೊಮ್ಮೆ ತಮ್ಮ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿರುವ ಭಯೋತ್ಪಾದನೆಯನ್ನು ವೈಭವೀಕರಿಸಿದ್ದಾರೆ ಎಂದು ಪಾಕ್​ ಪಿಎಂ ವಿರುದ್ಧ ಕಿಡಿಕಾರಿದ್ದಾರೆ.

ಇದಕ್ಕೂ ಮೊದಲು, ವಿಶ್ವಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಷರೀಫ್, ಪಾಕಿಸ್ತಾನವು ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಸಮಗ್ರ ಮತ್ತು ಸಂವಾದಕ್ಕೆ ಸಿದ್ಧವಾಗಿದೆ ಎಂದು ಹೇಳಿದರು. ಅಲ್ಲದೆ, ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಭಾರತವನ್ನು ಟೀಕಿಸಿದ ಷರೀಷ್ ದಕ್ಷಿಣ ಏಷ್ಯಾದಲ್ಲಿ ಯುದ್ಧವನ್ನು ತಪ್ಪಿಸಲು ಸಹಾಯ ಮಾಡಿದ ಟ್ರಂಪ್ ಶಾಂತಿಗಾಗಿ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ನಮ್ಮ ಭಾಗದಲ್ಲಿ ಶಾಂತಿಯನ್ನು ಉತ್ತೇಜಿಸಲು ಅಧ್ಯಕ್ಷ ಟ್ರಂಪ್ ಅದ್ಭುತ ಮತ್ತು ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, ಪಾಕಿಸ್ತಾನ ಟ್ರಂಪ್​ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ನಾವು ಮಾಡಬಹುದಾದ ಕನಿಷ್ಠ ಕೆಲಸ ಇದು. ಟ್ರಂಪ್​ ನಿಜವಾಗಿಯೂ ಶಾಂತಿಪ್ರಿಯ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ ಎಂದು ಪಾಕ್ ಪ್ರಧಾನಿ​ ಹೇಳಿದ್ದಾರೆ.

ಭಾರತ-ಪಾಕ್​ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಮೇ 10 ರಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮವನ್ನು ಘೋಷಿಸಿದರು. ಅಲ್ಲದೆ, ಮಧ್ಯಸ್ಥಿಕೆಯ ಹಕ್ಕುಗಳನ್ನು ಅವರು ಹಲವಾರು ಬಾರಿ ಪುನರಾವರ್ತಿಸಿದ್ದರೂ, ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ನೇರ ಮಿಲಿಟರಿ ಮಾತುಕತೆಗಳ ನಂತರ ಯುದ್ಧವನ್ನು ನಿಲ್ಲಿಸುವ ಬಗ್ಗೆ ಮಾತುಕತೆ ಮಾಡಿದ್ದೇವೆ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ.

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಮೇ 7 ರಂದು ಆರಂಭಿಸಲಾದ ಆಪರೇಷನ್ ಸಿಂಧೂರದ ಭಾಗವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net