

ವಾರಾಣಸಿ: ಲಂಡನ್ನ ಲಾರ್ಡ್ಸ್ ಕ್ರೀಡಾಂಗಣವನ್ನು ಕ್ರಿಕೆಟ್ ಕಾಶಿ ಎನ್ನಲಾಗುತ್ತದೆ. ಆದರೆ ಇದೀಗ ಭಾರತದಲ್ಲೇ ‘ಕ್ರಿಕೆಟ್ ಕಾಶಿ’ ನಿರ್ಮಾಣವಾಗುತ್ತಿದೆ! ಹೌದು, ಕಾಶಿ ವಿಶ್ವನಾಥನ ಥೀಮ್ನಲ್ಲೇ ಹೊಸ ಕ್ರಿಕೆಟ್ ಕ್ರೀಡಾಂಗಣವೊಂದು ನಿರ್ಮಾಣವಾಗುತ್ತಿದೆ. ತ್ರಿಶೂಲ, ಅರ್ಧಚಂದ್ರ, ಢಮರುಗ, ಬಿಲ್ವಪತ್ರೆಯ ವಿನ್ಯಾಸಗಳನ್ನು ಒಳಗೊಂಡ ಶಿವನ ಥೀಮ್ನಲ್ಲೇ ಈ ಕ್ರೀಡಾಂಗಣದ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದ್ದು, ಇಂದು ಈ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯ ಕ್ರೀಡಾಂಗಣವನ್ನು ರಾಜತಾಲಬ್‌ನ ಗಂಜಾರಿ ಏರಿಯಾದಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಶಿವನ ತಲೆಯ ಮೇಲಿರುವ ಅರ್ಧಚಂದ್ರಾಕೃತಿಯಲ್ಲೇ ಕ್ರೀಡಾಂಗಣದ ಮೇಲ್ಛಾವಣಿಯ ವಿನ್ಯಾಸವಿರಲಿದೆ. ಫ್ಲಡ್ಲೈಟ್ಗಳನ್ನು ದೊಡ್ಡ ತ್ರಿಶೂಲದ ಆಕೃತಿಯ ಕಂಬಗಳಲ್ಲಿ ಅಳವಡಿಸಲಾಗುತ್ತದೆ.
ಮುಖ್ಯ ಪ್ರವೇಶ ದ್ವಾರದಲ್ಲಿರುವ ಪೆವಿಲಿಯನ್ ಮತ್ತು ವಿಐಪಿ ಲಾಂಜ್ಗಳ ಗುಮ್ಮಟವು ಶಿವನ ಕೈಯಲ್ಲಿರುವ ಢಮರುಗದ ರೀತಿಯಲ್ಲೇ ಇರಲಿದೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗಳ ಆಸನ ವ್ಯವಸ್ಥೆಯನ್ನು ಕಾಶಿ ಘಾಟ್ಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೇಟುಗಳು ಬಿಲ್ವ ಪತ್ರೆಯ ರೀತಿಯಲ್ಲಿ ಇರಲಿವೆ.
ಉತ್ತರ ಪ್ರದೇಶ ಸರ್ಕಾರವು ಕ್ರೀಡಾಂಗಣದ ಭೂಮಿಯ ಸ್ವಾಮ್ಯಕ್ಕಾಗಿ 120 ಕೋಟಿ ರೂ. ವ್ಯಯಿಸಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಬಿಸಿಸಿಐ 330 ಕೋಟಿ ರೂ. ಖರ್ಚು ಮಾಡಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಿಸಿದ ಎಲ್ ಆಂಡ್ ಟಿ ಕಂಪನಿಯೇ ಈ ಕ್ರೀಡಾಂಗಣದ ಕಾಮಗಾರಿಯನ್ನೂ ನಿರ್ವಹಿಸಲಿದೆ. ಒಟ್ಟು 30 ಸಾವಿರ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಒಳಗೊಂಡಿರಲಿದೆ.
ಈ ಕ್ರೀಡಾಂಗಣ 2025ರ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಮತ್ತು ಕಾನ್ಪುರ ಮತ್ತು ಲಖನೌ ನಂತರ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. (ಏಜೆನ್ಸೀಸ್)