

ಮುಂಬೈ: ವಾಂಖೆಡೆ ಸ್ಟೇಡಿಯಂ 2 ಸೀಟುಗಳನ್ನು ಹರಾಜಿನಲ್ಲಿ ಇಡಲು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ನಿರ್ಧರಿಸಿದೆ. ಅಷ್ಟಕ್ಕೂ ಈ ಸೀಟುಗಳನ್ನೇಕೆ ಹರಾಜಿನಲ್ಲಿ ಇಡಲಾಗುತ್ತಿದೆ ಎಂಬ ಕುತೂಹಲವನ್ನು ಜನರು ವ್ಯಕ್ತಪಡಿಸಿದ್ದಾರೆ. ಅದಕ್ಕೆ ವಿಶೇಷವಾದ ಕಾರಣವೂ ಇದೆ. 2011ರ ವಿಶ್ವಕಪ್ ಟೂರ್ನಿಯ ವಿಶೇಷ ಘಟನೆ ಇದಕ್ಕೆ ಪೂರಕವಾಗಿದೆ.
2011ರ ವಿಶ್ವಕಪ್ನಲ್ಲಿ ನಾಯಕ ಎಂ.ಎಸ್. ಧೋನಿ ಬಾರಿಸಿದ್ದ ವಿನ್ನಿಂಗ್ ಸಿಕ್ಸರ್ ಈ ಎರಡು ಸೀಟುಗಳ ಮೇಲೆ ಲ್ಯಾಂಡ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಈ ಎರಡು ಸೀಟುಗಳನ್ನು ಹರಾಜಿನಲ್ಲಿ ಇಡಲು ಎಂಸಿಎ ನಿರ್ಧರಿಸಿದೆ.
2011ರ ವಿಶ್ವಕಪ್ ಫೈನಲ್ ಭಾರತ ಮತ್ತು ಶ್ರೀಲಂಕಾದ ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯವನ್ನು ಧೋನಿ ಅವರು ಅತ್ಯದ್ಭುತ ಸಿಕ್ಸರ್ನೊಂದಿಗೆ ಕೊನೆಗೊಳಿಸಿದರು. ಇಂದಿಗೂ ಅನೇಕರು ಈ ಸಿಕ್ಸರ್ ಅನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ 2023ರ ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಮುಂಬೈನ ವಾಂಖೆಡೆ ಸ್ಟೇಡಿಯಂ ಭರ್ಜರಿ ತಯಾರಿ ನಡೆಸುತ್ತಿದೆ. ವಿಶ್ವಕಪ್ನ ಪಂದ್ಯಗಳಿಗೆ ನಿಗದಿಯಾಗಿರುವ ಪ್ರಮುಖ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ.
ಇದೀಗ MCA ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ "ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಪಂದ್ಯಗಳಿಗಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಎರಡು ಸೀಟುಗಳನ್ನು ಹರಾಜಿಗೆ ಇಡಲಾಗುತ್ತದೆ. ಆ ಎರಡು ವಿಶೇಷ ಸೀಟುಗಳಿಗೆ ಎಂಎಸ್ ಧೋನಿ ಅವರ ಹೆಸರನ್ನು ಶಾಶ್ವತವಾಗಿ ಹೆಸರಿಸಲಾಗುವುದು ಮತ್ತು ಅದನ್ನು 'ಎಂಎಸ್ ಧೋನಿ ಸೀಟ್‌ಗಳು' ಎಂದು ಕರೆಯಲಾಗುತ್ತದೆ ಎಂದು ಎಂಸಿಎ ತಿಳಿಸಿದೆ.
ನಾವು ವಿಭಿನ್ನವಾಗಿರುವ ಒಂದನ್ನು ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ಸ್ಮಾರಕವಿಲ್ಲ, ಆದರೆ ಆ ಎರಡು ಸೀಟುಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೀಟುಗಳು ಸೋಫಾ/ಕಂಫರ್ಟರ್ ರೀತಿಯಲ್ಲಿ ಇರುತ್ತದೆ. ಇವುಗಳನ್ನು ಆತಿಥ್ಯ ಸೇವೆಗಳಿಗೆ ಬಳಸಲಾಗಿದೆ. ಈ ಸೀಟುಗಳನ್ನು ಪ್ರೀಮಿಯಂಗೆ (ಬೆಲೆ) ಮಾರಾಟ ಮಾಡುತ್ತೇವೆ. ಇನ್ನು 10 ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹೇಳಿದರು.
ಅಂದಹಾಗೆ ವಿಶ್ವಕಪ್ ಅ.5 ರಿಂದ ಆರಂಭವಾಗಲಿದೆ. ಫೈನಲ್ ಸೇರಿದಂತೆ ಒಟ್ಟು 45 ಪಂದ್ಯಗಳು ನಡೆಯಲಿದೆ. ಗುಜರಾತಿನ ಅಹಮದಾಬಾದ್ ಮತ್ತು ರಾಜ್ಕೋಟ್, ಉತ್ತರ ಪ್ರದೇಶದ ಲಖನೌ, ಮಹರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು, ದೆಹಲಿ, ಮಧ್ಯಪ್ರದೇಶದ ಇಂದೋರ್, ಪಂಜಾಬ್ನ ಮೊಹಾಲಿ, ಅಸ್ಸಾಂನ ಗುವಾಹಟಿ ಮತ್ತು ತೆಲಂಗಾಣದ ಹೈದರಾಬಾದ್ ಸೇರಿದಂತೆ ಭಾರತದ ಒಟ್ಟು 12 ನಗರಗಳ ಕ್ರೀಡಾಂಗಣಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. (ಏಜೆನ್ಸೀಸ್)