ಇಂಗ್ಲೆಂಡ್‌ನಲ್ಲಿ ಭಾರತ V/s ಭಾರತ ಎ ಮುಖಾಮುಖಿ!

eng tour web
Published on

ಲಂಡನ್: ಭಾರತ ತಂಡ ಈ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಆತಿಥೇಯರ ತಂಡಕ್ಕೆ ಬದಲಾಗಿ, ಭಾರತದ ಉದಯೋನ್ಮುಖ ಆಟಗಾರರನ್ನು ಒಳಗೊಂಡ ಭಾರತ ಎ ತಂಡದ ವಿರುದ್ಧವೇ 2 ಚತುರ್ದಿನ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

5 ಪಂದ್ಯಗಳ ಟೆಸ್ಟ್ ಸರಣಿಗೆ ಆಗಸ್ಟ್ 4ರಂದು ನಾಟಿಂಗ್‌ಹ್ಯಾಂನಲ್ಲಿ ಚಾಲನೆ ಸಿಗಲಿದೆ. ಅದಕ್ಕೆ ಮುನ್ನ ಭಾರತ ಮತ್ತು ಭಾರತ ಎ ತಂಡಗಳ ನಡುವೆ ಜುಲೈ 21ರಿಂದ 24ರವರೆಗೆ ನಾರ್ಥಂಪ್ಟನ್‌ಶೈರ್‌ನಲ್ಲಿ ಮೊದಲ ಮತ್ತು ಜುಲೈ 28ರಿಂದ 31ರವರೆಗೆ ಲೈಸೆಸ್ಟರ್‌ಶೈರ್‌ನಲ್ಲಿ 2ನೇ ಅಭ್ಯಾಸ ಪಂದ್ಯ ನಡೆಯಲಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡ ತನ್ನದೇ 2ನೇ ದರ್ಜೆಯ ತಂಡದೆದುರು ಪಂದ್ಯವನ್ನು ಆಡಲಿದೆ. ಈ 2 ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಮಾರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಭಾರತ ತಂಡದ ಜತೆಜತೆಯಲ್ಲೇ ಭಾರತ ಎ ತಂಡವೂ ಇಂಗ್ಲೆಂಡ್ ಪ್ರವಾಸದಲ್ಲಿರಲಿದ್ದು, ಡರ್ಬಿಶೈರ್ ಮತ್ತು ಎಸೆಕ್ಸ್ ತಂಡಗಳ ವಿರುದ್ಧವೂ ಆಡಲಿದೆ.

ಕಾರಣವೇನು ಗೊತ್ತೇ?

ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ತಂಡಗಳು ಅಲ್ಲಿನ ಕೌಂಟಿ ತಂಡಗಳ ವಿರುದ್ಧವೇ ಅಭ್ಯಾಸ ಪಂದ್ಯಗಳನ್ನು ಆಡುವುದು ಈ ಹಿಂದೆ ಸಾಮಾನ್ಯವೆನಿಸಿತ್ತು ಮತ್ತು ಈ ಪಂದ್ಯಗಳು ಭಾರಿ ಸ್ಪರ್ಧಾತ್ಮಕತೆಯಿಂದ ಕೂಡಿರುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕೌಂಟಿ ತಂಡಗಳು, ಪ್ರಮುಖ ಆಟಗಾರರು ಗಾಯಗೊಳ್ಳುವುದನ್ನು ತಪ್ಪಿಸಲು ತಮ್ಮ ದುರ್ಬಲ ತಂಡಗಳನ್ನು ಕಣಕ್ಕಿಳಿಸುತ್ತಿದ್ದವು. ಇದರಿಂದಾಗಿ 2019ರ ಆಶಸ್ ಸರಣಿಗೆ ಮುನ್ನ ಆಸ್ಟ್ರೇಲಿಯಾ ತಂಡ ಕೌಂಟಿ ತಂಡದೆದುರು ಆಡದೆ, ತನ್ನದೇ 2 ತಂಡ ರಚಿಸಿ ಅಭ್ಯಾಸ ಪಂದ್ಯವಾಡಿತ್ತು. ಇದೀಗ ಭಾರತ ಕೂಡ ಅದೇ ಮಾದರಿಯನ್ನು ಅನುಸರಿಸಿದ್ದು, ಆತಿಥೇಯರ ದುರ್ಬಲ ತಂಡಗಳೆದುರು ಆಡುವ ಬದಲಾಗಿ ತನ್ನದೇ ಮತ್ತೊಂದು ತಂಡದೆದುರು ಆಡಿ ಟೆಸ್ಟ್ ಸರಣಿಗೆ ಸಮರ್ಥ ಅಭ್ಯಾಸ ನಡೆಸಲು ಬಯಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net