

Imran Khan : ಪಾಕಿಸ್ತಾನಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನದ ಸೋಲು ಮತ್ತು ಆತಿಥೇಯರಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಆರಂಭಿಕ ಹಂತದಲ್ಲಿಯೇ ಹೊರಬಿದ್ದಿದ್ದಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಸಹೋದರಿ ಅಲೀಮಾ ಖಾನ್ ಹೇಳಿದ್ದಾರೆ.
ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಬಳಿಕ ಅಲೀಮಾ ಖಾನ್ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 23ರ ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಗ್ಗೆ ಇಮ್ರಾನ್ ಖಾನ್ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಅಲೀಮಾ ಬಹಿರಂಗಪಡಿಸಿದ್ದಾರೆ.
ಜೈಲಿನಲ್ಲೇ ಪಂದ್ಯವನ್ನು ವೀಕ್ಷಿಸಿರುವ ಇಮ್ರಾನ್ ಖಾನ್, ತಮ್ಮ ತಂಡದ ಹೀನಾಯ ಸೋಲಿಗೆ ಬೇಸರ ಹೊರಹಾಕಿದ್ದಾರೆ. ಅಲ್ಲದೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಸಾಮರ್ಥ್ಯವನ್ನೂ ಇಮ್ರಾನ್ ಪ್ರಶ್ನಿಸಿದ್ದಾರೆ. ಪ್ರಸ್ತುತ ಪಿಸಿಬಿಯಲ್ಲಿ ಉನ್ನತ ಸ್ಥಾನದಲ್ಲಿರುವವರ ಬಗ್ಗೆ ಇಮ್ರಾನ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಪಕ್ಷಪಾತಿಗಳನ್ನು ನಿರ್ಧಾರ ತೆಗೆದುಕೊಳ್ಳುವಂತಹ ಉನ್ನತ ಸ್ಥಾನಗಳಲ್ಲಿ ಇರಿಸಿದಾಗ ಪಾಕಿಸ್ತಾನ ಕ್ರಿಕೆಟ್ ಅಂತಿಮವಾಗಿ ಸರ್ವನಾಶವಾಗುತ್ತದೆ ಎಂದು ಇಮ್ರಾನ್ ಖಾನ್ ಎಚ್ಚರಿಸಿದ್ದಾರೆ ಎಂದು ಅಲೀಮಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಮ್ಮ ಆಟಗಾರರ ಗುಣಮಟ್ಟ ಮತ್ತು ನಿರ್ಣಾಯಕ ಪಂದ್ಯಗಳಲ್ಲಿ ಸ್ಪರ್ಧಿಸುವಾಗ ಅವರ ಮನಸ್ಥಿತಿಯನ್ನು ಟೀಕಿಸುತ್ತಿದ್ದರೆ, ಪಿಸಿಬಿಯ ಮಾಜಿ ಮುಖ್ಯಸ್ಥ ನಜಮ್ ಸೇಥಿ ಮಾತ್ರ ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಅವಧಿಯಿಂದಲೇ ಪಾಕಿಸ್ತಾನ ಕ್ರಿಕೆಟ್ ಪತನ ಆರಂಭವಾಯಿತು ಎಂದು ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಪಿಸಿಬಿ ಅಧ್ಯಕ್ಷ ಸ್ಥಾನದಿಂದ ನಜಮ್ ಸೇಥಿ ಕೆಳಗಿಳಿದರು. ದೇಶೀಯ ಕ್ರಿಕೆಟ್ ರಚನೆಯಲ್ಲಿ ಇಮ್ರಾನ್ ಖಾನ್ ಅಕ್ರಮ ಎಸಗಿದ್ದಾರೆ. ಇದು ಪಾಕಿಸ್ತಾನದ ಪ್ರತಿಭಾನ್ವಿತ ಆಟಗಾರರ ಸಂಖ್ಯೆ ಕುಸಿಯಲು ನಿರ್ಣಾಯಕ ಅಂಶವಾಯಿತು ಎಂದು ನಜಮ್ ಸೇಥಿ ಆರೋಪಿಸಿದ್ದಾರೆ.
2019ರಲ್ಲಿ ಇಮ್ರಾನ್ ಖಾನ್ ನಿರ್ದೇಶನದ ಮೇರೆಗೆ ಪಿಸಿಬಿ, ದೇಶೀಯ ಕ್ರಿಕೆಟ್ ರಚನೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ವಿಭಾಗೀಯ ಮತ್ತು ಪ್ರಾದೇಶಿಕ ತಂಡಗಳ ದೀರ್ಘಕಾಲದ ವ್ಯವಸ್ಥೆಯನ್ನು ಆರು ತಂಡಗಳ ಪ್ರಥಮ ದರ್ಜೆ ತಂಡಗಳಾಗಿ ಬದಲಾಯಿಸಿತು. ಇಮ್ರಾನ್ ಅವರ ಮಾಜಿ ತಂಡದ ಸಹ ಆಟಗಾರ ರಮೀಜ್ ರಾಜಾ ಅವರನ್ನು 2021ರಲ್ಲಿ ಪಿಸಿಬಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆದರೆ, ಇಮ್ರಾನ್ ನೇತೃತ್ವದ ಸರ್ಕಾರದ ಪತನದ ನಂತರ ಅವರು ತಮ್ಮ ಸ್ಥಾನವನ್ನು ತ್ಯಜಿಸಬೇಕಾಯಿತು. 2019ರಲ್ಲಿ ಹೊಸ ಪ್ರಧಾನಿ ಅಡಿಯಲ್ಲಿ ಹೊಸ ಆಡಳಿತ ಮಂಡಳಿಯು ಪಾಕಿಸ್ತಾನಕ್ಕೆ ದಶಕಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದ ದೇಶೀಯ ಕ್ರಿಕೆಟ್ ರಚನೆಯನ್ನೇ ಬದಲಾಯಿಸಿ, ಸೂಕ್ತವಲ್ಲದ ಆಸ್ಟ್ರೇಲಿಯಾದ ಹೈಬ್ರಿಡ್ ಮಾದರಿಯನ್ನು ಜಾರಿಗೆ ತಂದಿತು. ಅಲ್ಲಿಂದಾಚೆಗೆ ಪಾಕ್ ಕ್ರಿಕೆಟ್ ಪತನ ಆರಂಭವಾಯಿತು. ಕ್ರಿಕೆಟ್ನಲ್ಲಿ ರಾಜಕೀಯ ಹಸ್ತಕ್ಷೇಪ ಮುಂದುವರೆಯಿತು. ಅಲ್ಲದೆ, ವಿರೋಧಾತ್ಮಕ ಪಿಸಿಬಿ ನೀತಿಗಳು ರೂಢಿಯಾದವು. ವಿದೇಶಿ ತರಬೇತುದಾರರನ್ನು ನೇಮಿಸಲಾಯಿತು. ಆಯ್ಕೆದಾರರನ್ನು ವಿಚಿತ್ರವಾಗಿ ನಾಮನಿರ್ದೇಶನ ಮಾಡಲಾಯಿತು. ಈ ಹಿಂದೆ ತಿರಸ್ಕರಿಸಿದವರನ್ನು ಮಾರ್ಗದರ್ಶನ ಮತ್ತು ನಿರ್ವಹಣೆಗೆ ನೇಮಿಸಲಾಯಿತು. ಅಂತಿಮವಾಗಿ, ಆಟಗಾರರ ಶಕ್ತಿ, ನಾಯಕನ ಅಹಂಕಾರ ಮತ್ತು ತಂಡದಲ್ಲಿನ ಗುಂಪುಗಳ ಘರ್ಷಣೆಯು ಮೇಲುಗೈ ಸಾಧಿಸಿತು. ಇದೆಲ್ಲದರ ಭಯಾನಕ ಫಲಿತಾಂಶ ಇಂದು ನಮ್ಮ ಕಣ್ಣ ಮುಂದಿದೆ ಎಂದು ಸೇಥಿ ಹೇಳಿದರು.
ಪಾಕಿಸ್ತಾನ ಕ್ರಿಕೆಟ್ನಲ್ಲಿ ಇದೇ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ. ಏಕೆಂದರೆ ಮಧ್ಯಂತರ ಮುಖ್ಯ ಕೋಚ್ ಆಕಿಬ್ ಜಾವೇದ್ ನೇಮಕಗೊಂಡ ಕೇವಲ ನಾಲ್ಕು ತಿಂಗಳ ನಂತರ ಅವರನ್ನು ವಜಾಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. (ಏಜೆನ್ಸೀಸ್)