

Dangerous Bird : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ತಿಳಿಸಿಕೊಡುತ್ತೇವೆ.
ಈ ಜಗತ್ತಿನ ಅತ್ಯಂತ ಅಪಾಯಕಾರಿ ಪಕ್ಷಿ ಯಾವುದು ಗೊತ್ತಾ? ಅದುವೇ ಕ್ಯಾಸೋವರಿ. ಇದು ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದ ದಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. ಇದು ನೋಡಲು ತುಂಬಾ ವಿಚಿತ್ರ ಮತ್ತು ಭಯಾನಕವಾಗಿದೆ. ಇದರ ತಲೆಯ ಮೇಲೆ ಹೆಲ್ಮೆಟ್‌ನಂತಹ ಕಿರೀಟ, ಕಡು ನೀಲಿ ಮುಖ ಮತ್ತು ಅದರ ಕಣ್ಣುಗಳಲ್ಲಿ ಒಂದು ರೀತಿಯ ಕ್ರೌರ್ಯವಿದೆ. ನೋಡಲು ತುಂಬಾ ವಿಚಿತ್ರವಾಗಿ ಕಾಣುತ್ತದೆ. ಇನ್ನು ಈ ಹಕ್ಕಿಯ ಗಾತ್ರದ ಬಗ್ಗೆ ತಿಳಿದರೇ ನೀವು ಶಾಕ್ ಆಗ್ತೀರಾ! ಈ ಪಕ್ಷಿಯು ಮನುಷ್ಯನಷ್ಟು ಎತ್ತರ ಮತ್ತು 140 ಕೆಜಿ ವರೆಗೂ ತೂಗುತ್ತದೆ.
ಇನ್ನೂ ಈ ಪಕ್ಷಿಯ ಕಾಲುಗಳು ತುಂಬಾ ಬಲಿಷ್ಠವಾಗಿದ್ದು, ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು. ಇದೀಷ್ಟೇ ಅಲ್ಲ ಏಳು ಅಡಿ ಎತ್ತರಕ್ಕೆ ಜಿಗಿಯಬಲ್ಲವು. ಈ ಪಕ್ಷಿಗೆ ಹಾರಲು ಬರದಿದ್ದರೂ, ಅದು ಮಿಂಚಿನ ವೇಗದಲ್ಲಿ ಈಜಬಲ್ಲದು ಮತ್ತು ನೀರಿನಲ್ಲಿ ಜಿಗಿಯಬಲ್ಲದು.
ಕ್ಯಾಸೋವರಿಗಳು ನೋಡಲು ತುಂಬಾ ಭಯಾನಕವಾಗಿ ಕಂಡರು ಕೂಡ ಇವು ಮನುಷ್ಯರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಮತ್ತು ಅಂತರವನ್ನು ಕಾಯ್ದುಕೊಳ್ಳುತ್ತವೆ. ಅವುಗಳನ್ನು ಕೆರಳಿಸಿದರೆ ಮಾತ್ರ ಆಕ್ರಮಣಕಾರಿಯಾಗುತ್ತವೆ. ತುಂಬಾ ಕೋಪಗೊಂಡರೆ ದಾಳಿ ಮಾಡಲು ಕೂಡ ಹಿಂಜರಿಯುವುದಿಲ್ಲ. ತಮ್ಮ ಬಲವಾದ ಕಾಲುಗಳಿಂದ ಗಾಳಿಯಲ್ಲಿ ಹಾರಿ, ಚೂಪಾದ ಉಗುರುಗಳಿಂದ ತಮ್ಮ ಶತ್ರುಗಳ ಮೈಯನ್ನೇ ಸೀಳಿಬಿಡುತ್ತವೆ.
ಇನ್ನೂ ಭಯಾನಕ ಸಂಗತಿ ಏನೆಂದರೆ, ಈ ಕ್ಯಾಸೋವರಿ ಒದೆಗಳು ಮಾತ್ರ ಮೂಳೆಗಳನ್ನು ಮುರಿದು ಕೊಲ್ಲುವಷ್ಟು ಶಕ್ತಿಶಾಲಿಯಾಗಿವೆ. ಕ್ಯಾಸೋವರಿಗಳು ಭಾರವಾದ ಪಕ್ಷಿಗಳಾಗಿರುವುದರಿಂದ ಅವು ಒದೆಯುವಾಗ, ಒದೆತವು ಕೆಳಮುಖವಾಗಿರುತ್ತದೆ. ಆದ್ದರಿಂದ ಅವುಗಳ ತೂಕದ ಸಂಪೂರ್ಣ ಬಲವು ಅವುಗಳ ಒದೆತದ ಹಿಂದೆ ಇರುತ್ತದೆ. ಇದರಿಂದ ಮೂಳೆ ಮುರಿದುಹೋಗುತ್ತದೆ. ಕ್ಯಾಸೋವರಿ ಒದೆತಗಳು ತುಂಬಾ ಅಪಾಯಕಾರಿ ಏಕೆಂದರೆ ಅವುಗಳು 5 ಇಂಚುಗಳವರೆಗೆ ಬೆಳೆಯುವ ಉಗುರುಗಳನ್ನು ಸಹ ಹೊಂದಿರುತ್ತವೆ.
ಅಂದಹಾಗೆ ಈ ಪಕ್ಷಿಗಳು ಮನುಷ್ಯರ ಮೇಲೂ ದಾಳಿ ಮಾಡಬಹುದು. ಪಪುವಾ ನ್ಯೂಗಿನಿಯಾದಲ್ಲಿ ಕ್ಯಾಸೋವರಿಗಳ ಬಗ್ಗೆ ಐದು ವರ್ಷಗಳ ಕಾಲ ಸಂಶೋಧನೆ ನಡೆಸಿದ ವಿಜ್ಞಾನಿ ಆಂಡ್ರ್ಯೂ ಮ್ಯಾಕ್ ಅವರ ಪ್ರಕಾರ, ಕ್ಯಾಸೋವರಿಗಳನ್ನು ನೋಡುವುದು ಒಂದು ರೀತಿಯಲ್ಲಿ ಡೈನೋಸಾರ್‌ಗಳನ್ನು ನೋಡಿದಂತೆ. ಹೇಳಬೇಕೆಂದರೆ, ಅವು ಜೀವಂತ ಡೈನೋಸಾರ್‌ಗಳಂತೆ ಕಾಣುತ್ತವೆ ಎಂದಿದ್ದಾರೆ.
ಕ್ಯಾಸೋವರಿ ಪಕ್ಷಿಗಳು ಅಪಾಯಕಾರಿ ಅನ್ನೋದು ನಿಜ. ಆದರೆ, ಇಂದು ಅವುಗಳೇ ಮನುಷ್ಯರಿಂದ ಹೆಚ್ಚು ಅಪಾಯದಲ್ಲಿವೆ. ಬೇಟೆ, ಅರಣ್ಯನಾಶ ಮತ್ತು ರಸ್ತೆ ಅಪಘಾತಗಳಿಂದಾಗಿ ಅನೇಕ ಕ್ಯಾಸೋವರಿಗಳು ಸಾಯುತ್ತಿವೆ.
ಕ್ಯಾಸೋವರಿಯನ್ನು ಕಂಡಾಗ ಏನು ಮಾಡಬೇಕು ಅಂತ ಕೋಸ್ಟಲ್ & ಕ್ಯಾಸೋವರಿ ಕನ್ಸರ್ವೇಶನ್‌ನ ಸಂಸ್ಥಾಪಕ ಪೀಟರ್ ರೋಲ್ಸ್ ಹೇಳಿದ್ದಾರೆ. ಅವುಗಳನ್ನು ನೋಡಿದಾಗ ತುಂಬಾ ಶಾಂತವಾಗಿರಿ. ನಿಮ್ಮ ಕೈಗಳನ್ನು ನಿಮ್ಮ ಬೆನ್ನ ಹಿಂದೆ ಇರಿಸಿ. ಯಾವುದೇ ಕಾರಣಕ್ಕೂ ಆತುರಪಡಬೇಡಿ. ಹತ್ತಿರದಲ್ಲಿ ಮರವಿದ್ದರೆ, ಅದರ ಹಿಂದೆ ಅಡಗಿಕೊಳ್ಳಿ. ಕೂಗಬೇಡಿ ಮತ್ತು ನಿಮ್ಮ ಕೈಗಳನ್ನು ಮೇಲೆತ್ತಿ ಬೀಸಬೇಡಿ. ಕ್ಯಾಸೋವರಿ ನಿಮ್ಮ ಕಡೆಗೆ ತಿರುಗುವಂತೆ ಮಾಡಬೇಡಿ ಎಂದಿದ್ದಾರೆ.
ಕೆಲವು ಸ್ಥಳೀಯ ಬುಡಕಟ್ಟು ಜನಾಂಗದವರು ಕ್ಯಾಸೊವರಿಗಳನ್ನು ಬಹಳ ಗೌರವದಿಂದ ಕಾಣುತ್ತಾರೆ. ಸಾಂಪ್ರದಾಯಿಕ ನೃತ್ಯಗಳು, ಪೂಜೆಗಳು ಮತ್ತು ಕಥೆಗಳಲ್ಲಿ ಅವುಗಳನ್ನು ದೇವರುಗಳೆಂದು ಪರಿಗಣಿಸಲಾಗುತ್ತದೆ. ಈಗ ಕೆಲವು ಬುಡಕಟ್ಟು ಸಮುದಾಯಗಳು ಈ ಭವ್ಯ ಪಕ್ಷಿಗಳನ್ನು ಉಳಿಸಲು ಮುಂದೆ ಬಂದಿವೆ. (ಏಜೆನ್ಸೀಸ್)