ಖತರ್ನಾಕ್​ ಮಹಿಳೆಯರಿಬ್ಬರು ಎಳೆದು ತಂದ ಸೂಟ್​ಕೇಸ್​ ತೆರೆದು ನೋಡಿದ ಪೊಲೀಸರಿಗೆ ಕಾದಿತ್ತು ಶಾಕ್​! Khiladi Ladies

Khiladi Ladies
Published on

Khiladi Ladies : ಯಾವುದೇ ಗದ್ದಲವಿಲ್ಲದೆ ಮೃತ ದೇಹವನ್ನು ವಿಲೇವಾರಿ ಮಾಡಲು ಹೋದ ಇಬ್ಬರು ಮಹಿಳೆಯರು ಅನಿರೀಕ್ಷಿತ ರೀತಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಕೊಲ್ಕತ್ತದಲ್ಲಿ ಮಂಗಳವಾರ (ಫೆ.25) ನಡೆದಿದೆ.

ಸೂಟ್‌ಕೇಸ್‌ನಲ್ಲಿ ಶವವನ್ನು ತಂದ ಇಬ್ಬರು ಮಹಿಳೆಯರು, ನಗರದ ಕುಮಾರ್ತುಲಿ ಬಳಿಯ ಗಂಗಾ ನದಿ ಘಾಟ್‌ನಲ್ಲಿ ಎಸೆಯಲು ಯೋಜಿಸಿದ್ದರು. ಆದರೆ, ಸ್ಥಳೀಯರು ಅವರಿಬ್ಬರನ್ನು ಹಿಡಿದಿದ್ದಾರೆ.

ಕುಮಾರ್ತುಲಿ ಪ್ರದೇಶವು ದುರ್ಗಾ ಪೂಜೆಗೆ ವಿಗ್ರಹಗಳನ್ನು ತಯಾರಿಸುವ ಶಿಲ್ಪಿಗಳಿಗೆ ಒಂದು ಪ್ರಮುಖ ಕೇಂದ್ರವಾಗಿದೆ. ದುರ್ಗಾ ಪೂಜೆಯ ಸಮಯದಲ್ಲಿ ಹೊರತುಪಡಿಸಿ, ಉಳಿದ ಸಮಯದಲ್ಲಿ ಈ ಪ್ರದೇಶವು ಶಾಂತವಾಗಿದ್ದು ಕಡಿಮೆ ಜನದಟ್ಟಣೆಯಿಂದ ಕೂಡಿರುತ್ತದೆ.

ಈ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಶವವನ್ನು ನದಿಗೆ ಎಸೆಯಲು ಸಂಚು ಮಾಡಿದ್ದರು. ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ, ಅಲ್ಲಿನ ಸ್ಥಳೀಯರು ಇಬ್ಬರು ಮಹಿಳೆಯರು ಟ್ರಾಲಿ ಸೂಟ್‌ಕೇಸ್‌ನೊಂದಿಗೆ ಕ್ಯಾಬ್‌ನಿಂದ ಇಳಿಯುವುದನ್ನು ಗಮನಿಸಿದರು. ಅವರಿಬ್ಬರು ಸೂಟ್‌ಕೇಸ್ ಅನ್ನು ನದಿಯ ಕಡೆಗೆ ಎಳೆದೊಯ್ಯಲು ಪ್ರಯತ್ನಿಸಿದರು. ಆದರೆ, ಅವಬ್ಬರಿಗೆ ಸೂಟ್​ಕೇಸ್​ ಎಳೆಯುವುದು ಅಷ್ಟು ಸುಲಭವಾಗಿರಲಿಲ್ಲ.

ಈ ವೇಳೆ ಎಲ್ಲವನ್ನು ಗಮನಿಸುತ್ತಿದ್ದ ಸ್ಥಳೀಯರಿಗೆ ಮಹಿಳೆಯರಿಬ್ಬರ ಚಲವಲನ ಮೇಲೆ ಅನುಮಾನ ಮೂಡಿತು. ಬಳಿಕ ಅವರಿಬ್ಬರನ್ನು ವಿಚಾರಿಸಿದಾಗ, ಅವರು ಏನೇನೋ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆರಂಭದಲ್ಲಿ ಸೂಟ್‌ಕೇಸ್‌ನಲ್ಲಿ ಲ್ಯಾಬ್ರಡಾರ್ ನಾಯಿಯ ಶವವಿದೆ ಎಂದರು. ಬಳಿಕ ನಮ್ಮ ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್‌ಕೇಸ್ ಅನ್ನು ತೆರೆದಾಗ, ರಕ್ತದ ಕಲೆಗಳೊಂದಿಗೆ ಮಹಿಳೆಯ ಶವ ಪತ್ತೆಯಾಗಿದೆ. ಆ ಇಬ್ಬರು ಮಹಿಳೆಯರನ್ನು ಫಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂದು ಗುರುತಿಸಲಾಗಿದೆ. ಪೊಲೀಸರು ಅವರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ.

ಆರೋಪಿಗಳಿಬ್ಬರೂ ಕಾಜಿಪಾರದಿಂದ ಕುಮಾರ್ತುಲಿಗೆ ರೈಲಿನಲ್ಲಿ ಬಂದಿರುವುದು ಕಂಡುಬಂದಿದೆ. ಇಬ್ಬರೂ ಕೊಲ್ಕತ್ತ ಬಳಿಯ ಗ್ರಾಮವೊಂದರಲ್ಲಿ ಸ್ವಲ್ಪ ಸಮಯದಿಂದ ವಾಸಿಸುತ್ತಿದ್ದರು. ರಾತ್ರಿ ವೇಳೆ ಅಪರಿಚಿತರು ಅವರ ಮನೆಗೆ ಬರುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಅದು ಯಾರ ಶವ? ಕೊಲೆ ಹೇಗೆ ನಡೆಯಿತು? ಅವರು ಹೇಳಿದಂತೆ ಇದು ಆತ್ಮಹತ್ಯೆಯೇ? ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net