

ಢಾಕಾ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿರುವ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್, ಮಾಜಿ ಕ್ಯಾಪ್ಟನ್ ಶಕೀಬ್ ಅಲ್ ಹಸನ್ (Shakib Al Hasan), ತಮ್ಮ ವೃತ್ತಿಗೆ ಗುಡ್ಬೈ ಹೇಳಲು ಸಿದ್ದವಾಗಿದ್ದೇ ಆದರೂ ಕೆಲವೊಂದು ಆರೋಪಗಳಿಂದ ಮುಕ್ತರಾಗಿಲ್ಲ. ಪ್ರತಿಯೊಬ್ಬ ಆಟಗಾರನಿಗೆ ಸಿಗುವ ಉತ್ತಮ ಬೀಳ್ಕೊಡುಗೆ ಶಕೀಬ್ಗೆ ಸಿಗದೆ ಹೋಗಿದ್ದು ನಿಜಕ್ಕೂ ಬೇಸರದ ಸಂಗತಿ. ತನ್ನ ವೃತ್ತಿಜೀವನದ ಅಂತ್ಯದಲ್ಲಿ ತನ್ನನ್ನು ಪ್ರೀತಿಸುವ ಅಪಾರ ಸಂಖ್ಯೆಯ ಅಭಿಮಾನಿಗಳ ಎದುರು ಕಡೆಯ ಪಂದ್ಯವನ್ನಾಡಿ, ವಿದಾಯ ಹೇಳೋಣ ಎಂದಿದ್ದ ಹಸನ್, ಬಾಂಗ್ಲಾದೇಶ ಜನತೆಯಿಂದ ತೀವ್ರ ಟೀಕೆ ಮತ್ತು ದೊಡ್ಡ ಆರೋಪವೊಂದನ್ನು ಎದುರಿಸಿದರು.
ರಾಜಕೀಯ ಅಶಾಂತಿಯ ವೇಳೆ ನಡೆದ ಹತ್ಯೆಯಲ್ಲಿ ಶಕೀಬ್ ಅಲ್ ಹಸನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿತ್ತು. ಈ ಕೃತ್ಯದಲ್ಲಿ ಶಕೀಬ್ ಕೈವಾಡವಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಸನ್ಗೆ ಬಿಗಿ ಭದ್ರತೆಯ ಅವಶ್ಯಕತೆ ಹೆಚ್ಚಾಯಿತು. ನಿವೃತ್ತಿಯ ಹೊಸ್ತಿಲಲ್ಲಿದ್ದ ಶಕೀಬ್ ತಮ್ಮ ಕಡೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಲು ಬಯಸಿದ್ದರು. ಇದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಭದ್ರತೆ ಒದಗಿಸುವಂತೆ ಮನವಿ ಕೂಡ ಮಾಡಿದ್ದರು. ಆದ್ರೆ, ವಿಷಯದಲ್ಲಿ ಉಲ್ಟಾ ಹೊಡೆದ ಬಿಸಿಬಿ, ಭದ್ರತೆ ಕೊಡಲು ನಾವ್ಯಾರು ಎಂದು ಹೇಳಿ ವಿವಾದಗಳಿಂದ ಜಾರಿಗೊಂಡಿತ್ತು.
ಕೊಲೆ ಆರೋಪ ಕೇಳಿಬಂದಾಗಿನಿಂದಲೂ ಶಕೀಬ್ ವಿರುದ್ಧ ಬಾಂಗ್ಲಾದೇಶದಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿದೆ. ತಾನು ಸಂಸದನಾಗಿದ್ದ ಸರ್ಕಾರ ಪತನಗೊಂಡ ಬಳಿಕ ಇದೇ ಮೊದಲ ಬಾರಿಗೆ ಘಟನೆ ಕುರಿತು ಮಾತನಾಡಿದ ಶಕೀಬ್ ಅಲ್ ಹಸನ್, “ಮೊದಲನೆಯದಾಗಿ, ತಮ್ಮ ಜೀವವನ್ನು ತ್ಯಾಗ ಮಾಡಿದ, ತಾರತಮ್ಯ ವಿರೋಧಿ ಆಂದೋಲನವನ್ನು ಮುನ್ನಡೆಸಿದ ಮತ್ತು ಜನರ ದಂಗೆಯ ಸಮಯದಲ್ಲಿ ಹುತಾತ್ಮರಾದ ಹಾಗೂ ಗಾಯಗೊಂಡ ಎಲ್ಲರಿಗೂ ನಾನು ಗೌರವವನ್ನು ಸಲ್ಲಿಸಲು ಬಯಸುತ್ತೇನೆ. ಆ ಕುಟುಂಬಗಳಿಗೆ ನನ್ನ ಆಳವಾದ ಗೌರವ ಮತ್ತು ಸಂತಾಪ. ಪ್ರೀತಿ ಪಾತ್ರರ ನಷ್ಟವನ್ನು ಯಾವ ತ್ಯಾಗವೂ ಸರಿದೂಗಿಸಲು ಸಾಧ್ಯವಿಲ್ಲ. ಆ ಶೂನ್ಯತೆಯನ್ನು ಯಾರಿಂದಲೂ ಪೂರ್ಣಗೊಳಿಸಲು ಆಗುವುದಿಲ್ಲ. ಈ ಸಮಯದಲ್ಲಿ ನಾನು ಮೌನ ತಾಳಿದ್ದಕ್ಕೆ ದಯವಿಟ್ಟು ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).