

ಕಲ್ಕತ್ತಾ: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ತಿಂಗಳುಗಳ ಬಾಕಿ ಉಳಿದಿದ್ದು, ತಂಡಗಳ ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿ ಬ್ಯುಸಿಯಾಗಿವೆ. ಇದೀಗ ಲಖನೌ ಸೂಪರ್ಜೈಂಟ್ಸ್ ತಂಡವು ಜಹೀರ್ ಖಾನ್ರನ್ನು ಮೆಂಟರ್ ಆಗಿ ನೇಮಿಸಿದೆ. ಈ ಕುರಿತು ಲಖನೌ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗದಲ್ಲಿ ಕಾಣಿಸಿಕೊಂಡಿದ್ದ ಜಹೀರ್ ಖಾನ್ ಇದೀಗ ಹೊಸ ಹುದ್ದೆಯೊಂದಿಗೆ ಐಪಿಎಲ್ಗೆ ಮರಳುತ್ತಿರುವುದು ಮತ್ತಷ್ಟು ವಿಶೇಷವಾಗಿದೆ. 2018 ರಿಂದ 2022ರವರೆಗೆ ಮುಂಬೈ ಇಂಡಿಯನ್ಸ್ ತಂಡದ ನಿರ್ದೇಶಕರಾಗಿ, ಗ್ಲೋಬಲ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದರು. ಇದರ ನಡುವೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಂಡಿದ್ದರು.
17ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೂ ಮುನ್ನ ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಅವರಿಂದ ತೆರವಾದ ಸ್ಥಾನಕ್ಕೆ ಜಹೀರ್ರನ್ನು ನೇಮಿಸಲಾಗಿದ್ದು, ಜಹೀರ್ ಮೂಲಕ ಎರಡು ಹುದ್ದೆಗಳನ್ನು ಭರ್ತಿ ಮಾಡಲು ಲಖನೌ ಫ್ರಾಂಚೈಸಿ ಮುಂದಾಗಿದೆ. ಎಲ್ಎಸ್ಜಿ ತಂಡದ ಬೌಲಿಂಗ್ ಕೋಚ್ ಆಗಿ ಜಹೀರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ಮಾಹಿತಿ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ ಜಹೀರ್ ಟೀಮ್ ಇಂಡಿಯಾದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ನಲ್ಲಿ ಒಟ್ಟು 100 ಪಂದ್ಯಗಳನ್ನಾಡಿರುವ ಅವರು ಒಟ್ಟು 102 ವಿಕೆಟ್ಗಳನ್ನು ಕಬಳಿಸಿದ್ದಾರೆ.