

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿರುವ ಬೂಮ್ರಾ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರತಿ ಪಂದ್ಯದಲ್ಲೂ ವಿಕೆಟ್ ಕಬಳಿಸಿದ ಬುಮ್ರಾ, ರನ್ಗಳಿಗೂ ಕಡಿವಾಣ ಹಾಕಿದರು. ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ಅಕ್ಷರಶಃ ಕಾಡಿದರು.
ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲು ಬುಮ್ರಾ ಪ್ರಮುಖ ಕಾರಣ ಎಂದು ಸ್ವತಃ ವಿರಾಟ್ ಕೊಹ್ಲಿಯವರೇ ವಿಜಯೋತ್ಸವದ ಭಾಷಣದ ವೇಳೆ ಹೇಳಿದ್ದನ್ನು ಮರೆಯುವಂತಿಲ್ಲ. ಇತ್ತೀಚೆಗಷ್ಟೇ ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ಬುಮ್ರಾ, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ ಬುಮ್ರಾ, ವಿರಾಟ್ ಕೊಹ್ಲಿ ಕ್ಯಾಪ್ಟನ್ ಅಲ್ಲದಿದ್ದರೂ ಇಂದಿಗೂ ಅವರೇ ಟೀಮ್ ಇಂಡಿಯಾದ ಲೀಡರ್. ನಾಯಕತ್ವ ಎನ್ನುವುದು ಒಂದು ಹುದ್ದೆಯಷ್ಟೇ, ಆದರೆ ಲೀಡರ್ ಇಡೀ ತಂಡವನ್ನೇ ಮುನ್ನಡೆಸುತ್ತಾನೆ. ಆಟದ ಬಗೆಗಿನ ಕೊಹ್ಲಿ ಅವರ ಸಮರ್ಪಣೆ, ಅವರ ಶಕ್ತಿ ನಮೆಗಲ್ಲರಿಗೂ ಸದಾ ಸ್ಫೂರ್ತಿ ನೀಡುತ್ತದೆ ಎಂದು ಬುಮ್ರಾ ಅವರು ಕೊಹ್ಲಿ ಅವರನ್ನು ಕೊಂಡಾಡಿದರು.
ಅಂದಹಾಗೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬುಮ್ರಾ ಸುದೀರ್ಘ ಕಾಲ ಆಡಿದ್ದಾರೆ. ಕೊಹ್ಲಿ ನಂತರ ರೋಹಿತ್ ಶರ್ಮ ಮೂರು ಫಾರ್ಮ್ಯಾಟ್ಗಳಲ್ಲಿ ಟೀಮ್ ಇಂಡಿಯಾದ ನಾಯಕರಾದರು. ಇದೀಗ ರೋಹಿತ್ ಬದಲಿಗೆ ಸೂರ್ಯಕುಮಾರ್ ಯಾದವ್ ಟಿ20 ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ, ಕೊಹ್ಲಿ ನಾಯಕನಲ್ಲದಿದ್ದರೂ ಅವರೇ ತಂಡದ ಲೀಡರ್ ಎಂದು ಬುಮ್ರಾ ಹೇಳಿದ್ದಾರೆ. ಬುಮ್ರಾ ಮತ್ತು ಕೊಹ್ಲಿ ನಡುವೆ ಉತ್ತಮ ಬಾಂಧವ್ಯ ಇರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.
ಇದೇ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮ ಬಗ್ಗೆ ಮಾತನಾಡಿದ ಬುಮ್ರಾ, ತಾನು ಐಪಿಎಲ್ಗೆ ಹೊಸಬನಾಗಿದ್ದಾಗ ಫೀಲ್ಡ್ ಸೆಟ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ, ಆ ಸಮಯದಲ್ಲಿ ರೋಹಿತ್ ಶರ್ಮ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು ಎಂದು ಬುಮ್ರಾ ಬಹಿರಂಗಪಡಿಸಿದರು. ರೋಹಿತ್ಗೆ ನಾನು ಈ ಚೆಂಡನ್ನು ಬೌಲ್ ಮಾಡುತ್ತೇನೆ ಎಂದು ಮಾತ್ರ ಹೇಳುತ್ತಿದ್ದೆ. ಬಳಿಕ ರೋಹಿತ್, ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು ಎಂದು ಬುಮ್ರಾ ಹೇಳಿದ್ದಾರೆ.
ಬುಮ್ರಾ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೊಹ್ಲಿ ಮತ್ತು ರೋಹಿತ್ ಅಭಿಮಾನಿಗಳು ಬುಮ್ರಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)