

ನವದೆಹಲಿ: ಸುಮಾರು 17 ವರ್ಷಗಳ ನಂತರ ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅಮೆರಿಕ-ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಅಜೇಯ ತಂಡವಾಗಿ ಕಪ್ ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಮೋಘ ಹೋರಾಟ ನಡೆಸಿ, ಸೋಲಿನ ದವಡೆಯಲ್ಲಿದ್ದ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಚಾಂಪಿಯನ್ ಆಯಿತು. ಆದರೆ, ಇದೀಗ ಟಿ20 ವಿಶ್ವಕಪ್ ಬಗ್ಗೆ ಸಂಚಲನ ಮೂಡಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಅಂದರೆ, ಈ ಬಾರಿಯ ವಿಶ್ವಕಪ್ ಟೂರ್ನಿಯ ನಿರ್ವಹಣೆಯಲ್ಲಿ ಭಾರಿ ವಂಚನೆ ನಡೆದಿರುವುದನ್ನು ಐಸಿಸಿ ಪತ್ತೆ ಮಾಡಿದೆ.
ಅಮೆರಿಕ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತ್ತು. ಈ ಮೆಗಾ ಪಂದ್ಯಾವಳಿಗಾಗಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗಿದೆ. ಟಿ20 ವಿಶ್ವಕಪ್ ಟೂರ್ನಿಯನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದವು. ಆದರೆ, ಈ ಟೂರ್ನಿಯಲ್ಲಿ ಭಾರಿ ಹಣ ದುರುಪಯೋಗವಾಗಿದೆ ಎಂದು ವರದಿಯಾಗಿದೆ. ಇದರಿಂದ ಐಸಿಸಿಗೆ 165 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಟಿ20 ವಿಶ್ವಕಪ್ ಮುಗಿದ ಬಳಿಕ ಐಸಿಸಿ ಭಾರೀ ನಷ್ಟ ಅನುಭವಿಸಿತ್ತು. ಮೊದಲಿಗೆ ಅಮೆರಿಕದಂತಹ ಕ್ರಿಕೆಟ್ ಜನಪ್ರಿಯತೆ ಇಲ್ಲದ ದೇಶದಲ್ಲಿ ಈ ಟೂರ್ನಿ ನಡೆದಿದ್ದೇ ಈ ನಷ್ಟಕ್ಕೆ ಕಾರಣ ಎಂದು ಐಸಿಸಿ ಭಾವಿಸಿತ್ತು.
ಟಿಕೆಟ್ ಮಾರಾಟದ ಕೊರತೆ ಮತ್ತು ಜಾಹೀರಾತುಗಳ ಕೊರತೆಯ ಜೊತೆಗೆ, ಪಂದ್ಯಾವಳಿಯ ನಿರ್ವಹಣಾ ವೆಚ್ಚದಲ್ಲಿ ಭಾರಿ ಹೆಚ್ಚಳದಿಂದಾಗಿ ಇಷ್ಟು ಕೋಟಿ ನಷ್ಟವಾಗಿದೆ ಎಂದು ಐಸಿಸಿ ಅಧಿಕಾರಿಗಳು ಭಾವಿಸಿದ್ದರು. ಆದರೆ, ಇದು ನಷ್ಟವಲ್ಲ, ಹಗರಣ ಎಂಬ ಅನುಮಾನಗಳು ಉದ್ಭವಿಸಿದ್ದರಿಂದ, ಐಸಿಸಿ ಈ ಬಗ್ಗೆ ಸಮಿತಿಯನ್ನು ರಚಿಸಿದೆ.
ರೋಜರ್ ಟೂಸ್, ಲಾಸನ್ ನೆಡೂ ಮತ್ತು ಇಮ್ರಾನ್ ಖವಾಜಾ ಅವರನ್ನು ಒಳಗೊಂಡ ಸಮಿತಿಯನ್ನು ನೇಮಿಸಲಾಗಿದ್ದು, ಪೂರ್ಣ ಪ್ರಮಾಣದ ತನಿಖೆ ನಡೆಸಲು ಸಾಕಷ್ಟು ಸ್ವಾತಂತ್ರ್ಯವನ್ನು ಸಮಿತಿಗೆ ನೀಡಲಾಗಿದೆ. ಆದರೆ, ಹಣ ದುರುಪಯೋಗ ಮತ್ತು ಹಗರಣದ ವಿಚಾರವಾಗಿ ಸಮಿತಿ ರಚಿಸಿದ ಬಳಿಕ ಐಸಿಸಿಯ ಇಬ್ಬರು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ರಾಜೀನಾಮೆಯನ್ನು ಐಸಿಸಿ ಇನ್ನೂ ಅಂಗೀಕರಿಸಿಲ್ಲ. ಈ ಹಗರಣದಲ್ಲಿ ಇವರ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ. ಈ ಕುರಿತು ಫೋರೆನ್ಸಿಕ್ ಆಡಿಟ್ಗೆ ಆದೇಶಿಸಲು ನಿರ್ಧರಿಸಲಾಗಿದೆ. ಹಗರಣ ನಡೆದಿರುವುದು ಕಂಡುಬಂದರೆ ಐಸಿಸಿ ಅಧ್ಯಕ್ಷ ಮತ್ತು ಸಿಇಒ ಕೂಡ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)