

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಬಗ್ಗೆ ಆಘಾತಕಾರಿ ಸಂಗತಿಯೊಂದಿಗೆ ಹೊರಬಿದ್ದಿದೆ. ಶಮಿ ಅವರು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಅವರ ಆತ್ಮೀಯ ಗೆಳೆಯ ಉಮೇಶ್ ಕುಮಾರ್ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಮೊಹಮ್ಮದ್ ಶಮಿ ಅವರ ಜತೆಗೆ ಉಮೇಶ್ ಕುಮಾರ್ ಕೂಡ ಖ್ಯಾತ ಪತ್ರಕರ್ತ ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಮಿ ಬಗ್ಗೆ ಮಾತನಾಡುವಾಗ ಉಮೇಶ್ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಶಮಿ ಅವರ ಮಾಜಿ ಪತ್ನಿ ಹಶೀನ್ ಜಹಾನ್ ಅವರು ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದು ಗೊತ್ತೇ ಇದೆ. ಶಮಿ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಹುಡುಗಿಯೊಬ್ಬಳಿಂದ ಹಣ ಪಡೆದು ಶಮಿ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಜಹಾನ್ ಆರೋಪಿಸಿದ್ದರು.
ಶಮಿ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪ ಬಂದಂತಹ ಸಂದರ್ಭದಲ್ಲಿ ಶಮಿಯ ಮನಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮೂಡಿತ್ತು ಎಂದು ಉಮೇಶ್ ಕುಮಾರ್ ಅವರು ಪಾಡ್ಕಾಸ್ಟ್ನಲ್ಲಿ ಬಹಿರಂಗಪಡಿಸಿದ್ದಾರೆ. ಪತ್ನಿಯೊಂದಿಗೆ ಭಿನ್ನಾಭಿಪ್ರಾಯ, ಮ್ಯಾಚ್ ಫಿಕ್ಸಿಂಗ್ ಆರೋಪದಂತಹ ಸಂಕಷ್ಟದ ಸಂದರ್ಭಗಳಲ್ಲಿ ನಾನು ಶಮಿ ಜತೆಗಿದ್ದೆ. ಒಂದು ದಿನ ನಾನು ನೀರು ಕುಡಿಯಲು ಎದ್ದಾಗ ಬೆಳಗಿನ ಜಾವ ಸುಮಾರು 4 ಗಂಟೆಯಾಗಿತ್ತು. ನಾನು ಅಡುಗೆಮನೆಗೆ ಹೋಗುತ್ತಿದ್ದಾಗ ಶಮಿ ಬಾಲ್ಕನಿಯಲ್ಲಿ ನಿಂತಿರುವುದನ್ನು ನೋಡಿದೆ. ಅದು ನಾವು ವಾಸಿಸುತ್ತಿದ್ದ 19ನೇ ಮಹಡಿ. ಶಮಿ ಏನು ಮಾಡಲು ಹೊರಟ್ಟಿದ್ದಾನೆ ಎಂದು ನನಗೆ ಅರ್ಥವಾಯಿತು. ಆದರೆ, ಆತ್ಮಹತ್ಯೆ ಯೋಚನೆ ಕೈಬಿಟ್ಟ. ಆ 30 ದಿನಗಳು ಶಮಿ ಜೀವನದಲ್ಲಿ ತುಂಬಾ ಕಠಿಣ ದಿನಗಳು. ಶಮಿ ಜಾಗದಲ್ಲಿ ಮತ್ತೊಬ್ಬನಿದ್ದರೆ ಆತ ಉಳಿಯುತ್ತಿರಲಿಲ್ಲ ಮತ್ತೆ ಕ್ರಿಕೆಟ್ ಆಡುತ್ತಿರಲಿಲ್ಲ. ಒಂದು ದಿನ, ನಾವು ಮಾತನಾಡುತ್ತಿರುವಾಗ, ಅವರ ಫೋನ್ಗೆ ತನಿಖೆ ನಡೆಸುತ್ತಿರುವ ಸಮಿತಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸಂದೇಶ ಬಂದಿತು. ಬಹುಶಃ ಆ ದಿನ ಅವರು ವಿಶ್ವಕಪ್ ಗೆದ್ದಿದ್ದಕ್ಕಿಂತಲೂ ಹೆಚ್ಚು ಖುಷಿಪಟ್ಟಿದ್ದಾರೆ ಎಂದು ಉಮೇಶ್ ಬಹಿರಂಗಪಡಿಸಿದರು.
ತನ್ನ ವಿರುದ್ಧದ ಯಾವುದೇ ಆರೋಪಗಳನ್ನು ನಾನು ಸಹಿಸಬಲ್ಲೆ, ಆದರೆ ದೇಶಕ್ಕೆ ದ್ರೋಹ ಬಗೆದಿರುವ ಆರೋಪವನ್ನು ಸಹಿಸಲಾರೆ ಎಂದು ಶಮಿ ಇದೇ ಸಂದರ್ಭದಲ್ಲಿ ಹೇಳಿದರು. ಗಂಭೀರ ಆರೋಪಗಳ ಸಂದರ್ಭದಲ್ಲಿ ನನ್ನ ಮನುಸು ಛಿದ್ರವಾಗಿತ್ತು. ತುಂಬಾ ನೋವಾಗಿತ್ತು. ಆದಾಗ್ಯೂ, ನಾನು ಬದುಕುಳಿದೆ ಮತ್ತು ಮರಳಿದೆ. ಆದರೆ, ನನ್ನನ್ನು ಈ ಮಟ್ಟಕ್ಕೆ ತಲುಪಲು ಕಾರಣವಾದ ಕ್ರಿಕೆಟ್ ಅನ್ನು ಬಿಟ್ಟುಬಿಡಬೇಕೆಂದು ಭಾವಿಸಿದ್ದೆ. ಆದರೆ, ನನ್ನನ್ನು ಶ್ರೇಷ್ಠನನ್ನಾಗಿಸಿದ ಕ್ರಿಕೆಟ್ ಅನ್ನು ನಾನೇಕೆ ತ್ಯಜಿಸಬೇಕು ಎಂಬ ನಿರ್ಧಾರಕ್ಕೆ ಬಂದೆ. ನಾನೀಗ ಹೀಗಿದ್ದೇನೆ ಎಂದು ಶಮಿ ಹೇಳಿದರು.
ಅಂದಹಾಗೆ ಶಮಿ ವಿರುದ್ಧ ಜಹಾನ್, ಜಾಧವಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೆ, ಮಾಜಿ ಪತಿಯ ಕಾಲ್ ರೆಕಾರ್ಡಿಂಗ್ಸ್ ಸಹ ಶೇರ್ ಮಾಡಿದ್ದರು. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಸ್ಟಾರ್ ಬೌಲರ್ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್)