ನಿಗದಿಯಂತೆ ಐಪಿಎಲ್​ ಆರಂಭದ ಬಗ್ಗೆ ಅನುಮಾನ ಮೂಡಿಸಿದೆ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು

cskipl
Published on

ನವದೆಹಲಿ: ಯುಎಇಯಲ್ಲಿ ಐಪಿಎಲ್​ 13ನೇ ಆವೃತ್ತಿಗೆ ಸಜ್ಜಾಗುತ್ತಿರುವ ನಡುವೆ ಬಿಸಿಸಿಐಗೆ ದೊಡ್ಡ ತಲೆನೋವೊಂದು ಎದುರಾಗಿದೆ. ಅದುವೇ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಸದಸ್ಯರು ಕರೊನಾ ಸೋಂಕಿಗೆ ತುತ್ತಾಗಿರುವುದು. ಇಬ್ಬರು ಆಟಗಾರರ ಸಹಿತ ಒಟ್ಟು 13 ಸದಸ್ಯರು ಕರೊನಾ ಪಾಸಿಟಿವ್​ ಆಗಿರುವುದು ಟೂರ್ನಿಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ. ಟೂರ್ನಿ ನಿಗದಿಯಂತೆ ಸೆಪ್ಟೆಂಬರ್​ 19ರಂದು ಆರಂಭವಾಗುವ ಬಗ್ಗೆಯೇ ಈಗ ಅನುಮಾನಗಳು ಮೂಡಿವೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳೋದೇನು ಗೊತ್ತೇ?

'ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಪರಿಸ್ಥಿತಿಯ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಟೂರ್ನಿಯನ್ನು ನಿಗದಿಯಂತೆ ಆರಂಭಿಸಲಾಗುವುದೇ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ. ಐಪಿಎಲ್​ ಟೂರ್ನಿಯನ್ನು ಆಯೋಜಿಸುವ ಬಗ್ಗೆ ನಮಗೆ ಭರವಸೆ ಇದೆ. ಟೂರ್ನಿಗೆ ನಾವು ಸುದೀರ್ಘ ವೇಳಾಪಟ್ಟಿಯನ್ನು ಹೊಂದಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆಯಲಿ ಎಂದು ಆಶಿಸುತ್ತಿದ್ದೇವೆ. ಕರೊನಾ ಹಾವಳಿಯಿಂದ ಇಡೀ ವಿಶ್ವವೇ ತತ್ತರಿಸಿದೆ. ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಫುಟ್​ಬಾಲ್​ ಮತ್ತು ಕ್ರಿಕೆಟ್​ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ' ಎಂದು ಗಂಗೂಲಿ ಹೇಳಿದ್ದಾರೆ.

ಚೆನ್ನೈ ಸೂಪರ್​ಕಿಂಗ್ಸ್ ತಂಡದ ವೇಗಿ ದೀಪಕ್​ ಚಹರ್​ ಮತ್ತು ಬ್ಯಾಟ್ಸ್​ಮನ್​ ಋತುರಾಜ್​ ಗಾಯಕ್ವಾಡ್​ಗೆ ಕರೊನಾ ಸೋಂಕು ದೃಢಪಟ್ಟಿದ್ದರೆ, ತಂಡದ ಉಪನಾಯಕ ಹಾಗೂ ಎಡಗೈ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಕರೊನಾ ಭೀತಿಯಿಂದಲೇ ದಿಢೀರ್​ ಆಗಿ ತವರಿಗೆ ವಾಪಸ್​ ಆಗಿದ್ದಾರೆ ಎನ್ನಲಾಗುತ್ತಿದೆ. ದುಬೈಗೆ ತೆರಳುವುದಕ್ಕೆ ಮುನ್ನ ಚೆನ್ನೈ ಸೂಪರ್​ಕಿಂಗ್ಸ್​ ತಂಡ ಚೆನ್ನೈನಲ್ಲಿ 6 ದಿನಗಳ ಶಿಬಿರ ಆಯೋಜಿಸಿದ್ದೇ ಎಡವಟ್ಟಿಗೆ ಕಾರಣ ಎನ್ನಲಾಗುತ್ತಿದೆ.

ಹಾಲಿ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್​ 19ರಂದು ಚೆನ್ನೈ ಸೂಪರ್​ಕಿಂಗ್ಸ್ ತಂಡ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಬೇಕಾಗಿದೆ. ಆದರೆ ಸಿಎಸ್​ಕೆ ತಂಡಕ್ಕೆ ಕರೊನಾ ಆಘಾತ ಎದುರಾಗಿರುವುದರಿಂದ ಅದನ್ನು ಉದ್ಘಾಟನಾ ಪಂದ್ಯದಿಂದ ದೂರವಿಡುವ ಸಾಧ್ಯತೆಯೂ ಹರಡಿದೆ. ತಂಡದ ಸದಸ್ಯರಿಗೆ ಕರೊನಾ ದೃಢಪಟ್ಟಿರುವುದರಿಂದ ಎಲ್ಲರೂ ಇನ್ನು 7 ದಿನಗಳ ಕಾಲ ಹೆಚ್ಚುವರಿ ಅವಧಿ ಕ್ವಾರಂಟೈನ್​ನಲ್ಲಿರಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net