

ಪೋರ್ಟ್ ಆಫ್ ಸ್ಪೇನ್: ನಾಯಕ ಕೈರಾನ್ ಪೊಲ್ಲಾರ್ಡ್ (72 ರನ್, 28 ಎಸೆತ, 2 ಬೌಂಡರಿ, 9 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟ್ರಿನ್ಬಾಗೋ ನೈಟ್ರೈಡರ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಲ್ಲಿ ಸತತ 6ನೇ ಜಯ ದಾಖಲಿಸಿ ಅಜೇಯ ಓಟ ಮುಂದುವರಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ವಿರುದ್ಧ 2 ವಿಕೆಟ್ಗಳಿಂದ ರೋಚಕ ಜಯ ದಾಖಲಿಸಿದ ಟ್ರಿನ್ಬಾಗೋ ನೈಟ್ರೈಡರ್ಸ್ ತಂಡ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಜಮೈಕಾ ತಲ್ಲವಾಹ್ಸ್ ತಂಡ ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡವನ್ನು 37 ರನ್ಗಳಿಂದ ಮಣಿಸಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಬಾರ್ಬಡೋಸ್ ತಂಡ 7 ವಿಕೆಟ್ಗೆ 148 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ನೈಟ್ರೈಡರ್ಸ್ ತಂಡ ಒಂದು ಹಂತದಲ್ಲಿ 77 ರನ್ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿತ್ತು. ಆಗ ಏಕಾಂಗಿ ಹೋರಾಟದ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಪೊಲ್ಲಾರ್ಡ್, ಟ್ರೈಡೆಂಟ್ ಬೌಲರ್ಗಳನ್ನು ಬೆಂಡೆತ್ತಿದರು. ಪೊಲ್ಲಾರ್ಡ್ ಕ್ರೀಸ್ಗೆ ಇಳಿದಾಗ ನೈಟ್ರೈಡರ್ಸ್ಗೆ 39 ಎಸೆತಗಳಲ್ಲಿ 87 ರನ್ ಅಗತ್ಯವಿತ್ತು. ಭರ್ಜರಿ ಸಿಕ್ಸರ್ಗಳ ಮೂಲಕ ತಂಡವನ್ನು ಗೆಲುವಿನ ಸನಿಹ ತಂದ ಪೊಲ್ಲಾರ್ಡ್ ಅಂತಿಮ ಓವರ್ನಲ್ಲಿ 15 ರನ್ ಅಗತ್ಯವಿದ್ದಾಗ ಮೊದಲ ಎಸೆತದಲ್ಲೇ ಮತ್ತೆ ಸಿಕ್ಸರ್ ಸಿಡಿಸಿದರು. ಆದರೆ ರೈಫರ್ ಎಸೆದ ಅಂತಿಮ ಓವರ್ನ 2ನೇ ಎಸೆತದಲ್ಲಿ 2 ರನ್ ಕಸಿಯುವ ಯತ್ನದಲ್ಲಿ ಪೊಲ್ಲಾರ್ಡ್ ರನೌಟ್ ಬಲೆಗೆ ಬಿದ್ದರು. ಉಳಿದ 4 ಎಸೆತಗಳಲ್ಲಿ 8 ರನ್ ಅಗತ್ಯವಿದ್ದಾಗ ಬಾಲಂಗೋಚಿಗಳಾದ ಖಾರಿ ಪೈರ್ ಮತ್ತು ಜೇಡನ್ ಸೀಲ್ಸ್ ಇನ್ನೂ ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. 4ನೇ ಎಸೆತದಲ್ಲಿ ಪೈರ್ ಸಿಕ್ಸರ್ ಸಿಡಿಸಿ ಗೆಲುವು ಸುಲಭಗೊಳಿಸಿದರು.
ಬಾರ್ಬಡೋಸ್ ಟ್ರೈಡೆಂಟ್ಸ್: 7 ವಿಕೆಟ್ಗೆ 148 (ಶೈ ಹೋಪ್ 4, ಚಾರ್ಲ್ಸ್ 47, ಮೇಯರ್ಸ್ 42, ಹೋಲ್ಡರ್ 3, ಕೋರಿ ಆಂಡರ್ಸನ್ 6, ನರ್ಸ್ 19, ರಶೀದ್ ಖಾನ್ 12, ಹುಸೇನ್ 30ಕ್ಕೆ 2, ಸೀಲ್ಸ್ 21ಕ್ಕೆ 2, ಸಿಕಂದರ್ ರಾಜಾ 11ಕ್ಕೆ 2), ಟ್ರಿನ್ಬಾಗೋ ನೈಟ್ರೈಡರ್ಸ್: 19.5 ಓವರ್ಗಳಲ್ಲಿ 8 ವಿಕೆಟ್ಗೆ 149 (ಸಿಮ್ಮನ್ಸ್ 32, ವೆಬ್ಸ್ಟರ್ 5, ಮನ್ರೋ 0, ಡರೇನ್ ಬ್ರಾವೊ 6, ಪೊಲ್ಲಾರ್ಡ್ 72, ಕೈರನ್ ಪೈರ್ 10 *, ಹೋಲ್ಡರ್ 27ಕ್ಕೆ 2, ರಶೀದ್ ಖಾನ್ 21ಕ್ಕೆ 1, ಸ್ಯಾಂಟ್ನರ್ 13ಕ್ಕೆ 1). ಪಂದ್ಯಶ್ರೇಷ್ಠ: ಕೈರಾನ್ ಪೊಲ್ಲಾರ್ಡ್.
ಜಮೈಕಾಗೆ ಜಯ ತಂದ ಫಿಲಿಪ್ಸ್
ದಿನದ 2ನೇ ಪಂದ್ಯದಲ್ಲಿ ಆರಂಭಿಕ ಗ್ಲೆನ್ ಫಿಲಿಪ್ಸ್ (79 ರನ್, 61 ಎಸೆತ, 2 ಬೌಂಡರಿ, 6 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ನೆರವಿನಿಂದ ಜಮೈಕಾ ತಲ್ಲವಾಹ್ಸ್ ತಂಡ ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಆಡಿದ 6ನೇ ಪಂದ್ಯದಲ್ಲಿ 3ನೇ ಗೆಲುವು ಒಲಿಸಿಕೊಂಡಿತು. ಈ ಮೂಲಕ ಸೆಮಿಫೈನಲ್ ಆಸೆ ಜೀವಂತ ಉಳಿಸಿಕೊಂಡಿತು.
ಜಮೈಕಾ ತಲ್ಲವಾಹ್ಸ್: 6 ವಿಕೆಟ್ಗೆ 147 (ಗ್ಲೆನ್ ಫಿಲಿಪ್ಸ್ 79, ಬೋನರ್ 16, ಬ್ಲ್ಯಾಕ್ವುಡ್ 27, ಆಸಿಫ್ ಅಲಿ 14, ಪೊವೆಲ್ 1, ಬ್ರಾಥ್ವೇಟ್ 0, ಎಮ್ರಿಟ್ 32ಕ್ಕೆ 3, ಕಾಟ್ರೆಲ್ 43ಕ್ಕೆ 1, ಇಶ್ ಸೋಧಿ 27ಕ್ಕೆ 1), ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್: 19.4 ಓವರ್ಗಳಲ್ಲಿ 110(ಕ್ರಿಸ್ ಲ್ಯಾನ್ 8, ಕೈರಾನ್ ಪೊವೆಲ್ 21, ರಾಮ್ದಿನ್ 13, ಡಂಕ್ 2, ಕೆಲ್ಲಿ 16, ಎವಿನ್ ಲೆವಿಸ್ 21, ಬ್ರಾಥ್ವೇಟ್ 11ಕ್ಕೆ 3, ಎಡ್ವರ್ಡ್ಸ್ 39ಕ್ಕೆ 2, ಪೆರುಮಾಳ್ 20ಕ್ಕೆ 2, ಲಮಿಚೇನ್ 27ಕ್ಕೆ 2). ಪಂದ್ಯಶ್ರೇಷ್ಠ: ಗ್ಲೆನ್ ಫಿಲಿಪ್ಸ್.
ಭಾನುವಾರದ ಪಂದ್ಯಗಳು:
ಬಾರ್ಬಡೋಸ್ ಟ್ರೈಡೆಂಟ್ಸ್-ಸೇಂಟ್ ಲೂಸಿಯಾ ಜೌಕ್ಸ್
ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)
ಗಯಾನಾ ಅಮೇಜಾನ್ ವಾರಿಯರ್ಸ್-ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್
ಆರಂಭ: ರಾತ್ರಿ 11.45 (ಭಾರತೀಯ ಕಾಲಮಾನ)
ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್