

ಇಸ್ಲಮಾಬಾದ್: ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಭಾರತದ ಪರವಾಗಿ ಐಸಿಸಿ ಪಕ್ಷಪಾತದ ನಿಲುವು ಹೊಂದಿದೆ. ಏನೇ ಆಗಲಿ ಭಾರತ ಸಮಿಫೈನಲ್ ತಲುಪಲೇ ಬೇಕು ಎಂಬುದನ್ನು ಐಸಿಸಿ ಬಯಸಿದೆ ಎಂದು ಅಫ್ರಿದಿ ಆರೋಪ ಮಾಡಿದ್ದಾರೆ. ಅ.23ರಂದು ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ನೋ ಬಾಲ್ ಮನವಿಗೆ ಅಂಪೈರ್ ಸ್ಪಂದಿಸಿದ್ದನ್ನು ಮುಂದಿಟ್ಟುಕೊಂಡು ಅಫ್ರಿದಿ ಈ ಆರೋಪ ಮಾಡಿದ್ದಾರೆ. ಅಂಪೈರ್ನ ಈ ನಿರ್ಧಾರದ ವಿರುದ್ಧ ಪಾಕ್ನ ಕೆಲ ಮಾಜಿ ಆಟಗಾರರು ಸಹ ಧ್ವನಿ ಎತ್ತಿದ್ದರು. ಅಂಪೈರ್ ನೋಬಾಲ್ ತೀರ್ಮಾನವೇ ಇಡೀ ಪಂದ್ಯಕ್ಕೆ ದೊಡ್ಡ ತಿರುವು ನೀಡಿತು ಮತ್ತು ಭಾರತಕ್ಕೆ ಗೆಲುವು ಲಭಿಸಿತು.
ಬಾಂಗ್ಲಾದೇಶದ ವಿರುದ್ಧ ಆಡುವಾಗಲೇ ಕೊಹ್ಲಿ ಮತ್ತೊಮ್ಮೆ ನೋಬಾಲ್ ಮನವಿಯನ್ನು ಗೆದ್ದಿದ್ದರು. ಈ ವೇಳೆ ಕೊಹ್ಲಿ ಮತ್ತು ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು. ಅಲ್ಲದೆ, ಕೊಹ್ಲಿ ಅವರು ನಕಲಿ ಕ್ಷೇತ್ರ ರಕ್ಷಣೆ ಮಾಡಿದ್ದಾರೆಂದು ಸಹ ಬಾಂಗ್ಲಾ ಆಟಗಾರರು ಆರೋಪ ಮಾಡಿದ್ದಾರೆ. ನಕಲಿ ಕ್ಷೇತ್ರ ರಕ್ಷಣೆಯನ್ನು ಅಂಪೈರ್ಗಳು ಗುರುತಿಸಲಿಲ್ಲ ಎಂದು ದೂರಿದ್ದಾರೆ.
ಇದೀಗ ಪಾಕಿಸ್ತಾನದ ಸಾಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಫ್ರಿದಿ, ಬಾಂಗ್ಲಾ ವಿರುದ್ಧದ ಪಂದ್ಯದ ನಡುವೆ ಮಳೆ ಬಂದು ನೆಲವು ಎಷ್ಟು ತೇವವಾಗಿತ್ತು ಎಂಬುದನ್ನು ನೀವು ನೋಡಿದ್ದೀರಿ. ಆದರೆ ಐಸಿಸಿ ನಿರ್ಧಾರ ಭಾರತದ ಕಡೆಗೆ ಒಲವು ತೋರಿದಂತಿದೆ. ಏನೇ ಆಗಲಿ ಭಾರತ ಸೆಮಿಫೈನಲ್ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಐಸಿಸಿ ಬಯಸುತ್ತದೆ. ಅಲ್ಲದೆ, ಅಂಪೈರ್ಗಳು ಕೂಡ ಭಾರತ ಪರ ಒಲವು ತೋರಿದ್ದಕ್ಕೆ ಅತ್ಯುತ್ತಮ ಅಂಪೈರ್ಸ್ ಎಂಬ ಪ್ರಶಸ್ತಿ ಪಡೆಯುತ್ತಾರೆ ಎಂದು ಕುಹುಕವಾಡುತ್ತಾ ಐಸಿಸಿ ಹಾಗೂ ಅಂಪೈರ್ಗಳ ವಿರುದ್ಧ ಆರೋಪ ಮಾಡಿದ್ದಾರೆ.
ಭಾರಿ ಮಳೆಯಿಂದಾಗಿ ಮೈದಾನ ತೀವ್ರ ತೇವವಾಗಿತ್ತು. ಅಲ್ಲದೆ, ಭಾರತ ಕೂಡ ಸೋಲಿನ ದವಡೆಯಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೈದಾನದ ಸ್ಥಿತಿಯನ್ನು ನಿರ್ಲಕ್ಷಿಸಿದ ಅಂಪೈರ್ಗಳು ಆಡಲು ಅನುಮತಿ ನೀಡಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ.
ಭಾರತದ ವಿರುದ್ಧ ಪಾಕ್ ಸೋತಾಗಿನಿಂದ ಹತಾಶೆಯಲ್ಲಿ ಪಾಕ್ ಆಟಗಾರರು ಭಾರತದ ವಿರುದ್ಧ ಒಂದಲ್ಲ ಒಂದು ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ಭಾರತೀಯ ಕ್ರೀಡಾಭಿಮಾನಿಗಳು ಮಾತ್ರ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತಿದ್ದಾರೆ. ಸದ್ಯ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಸೆಮಿ ಫೈನಲ್ ಹಂತ ಪ್ರವೇಶಿಸಿದ್ದು, ಫೈನಲ್ ಹಂತಕ್ಕೇರುವ ಪ್ರಯತ್ನದಲ್ಲಿದೆ. (ಏಜೆನ್ಸೀಸ್)