

ನವದೆಹಲಿ: ಕರೊನಾ ಹಾವಳಿ ಶುರುವಾಗಿ ದೇಶ ಲಾಕ್ಡೌನ್ ಆದ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಅನಿಲ್ ಚೌಧರಿ ನೆಟ್ವರ್ಕ್ ಸಿಗದ ಕಾರಣ ಮರವೇರಿ ಮೊಬೈಲ್ ಕರೆ ಮಾಡಿದ್ದರು. ಅವರ ಈ ಪರದಾಟ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಈಗ ಅವರ ಊರಿನಲ್ಲಿ ನೆಟ್ವರ್ಕ್ ಸಮಸ್ಯೆ ಇಲ್ಲ. ಅವರು ಮರವೇರಿದ ಬಳಿಕ ಏನೇನಾಯಿತು ಎಂಬುದರ ವಿವರಣೆ ಇಲ್ಲಿದೆ.
ಕಳೆದ ಮಾರ್ಚ್ನಲ್ಲಿ ಭಾರತ ಮತ್ತು ದಣ ಆಫ್ರಿಕಾ ನಡುವಿನ ಏಕದಿನ ಸರಣಿಯಲ್ಲಿ ಕಾರ್ಯನಿರ್ವಹಿಸಲು ನೇಮಕಗೊಂಡಿದ್ದ ಅಂಪೈರ್ ಅನಿಲ್ ಚೌಧರಿ, ಸರಣಿ ಮೊಟಕುಗೊಂಡ ಬಳಿಕ ತಮ್ಮ ಹುಟ್ಟೂರಿಗೆ ತೆರಳಿದ್ದರು. ಆದರೆ ದೆಹಲಿಯಿಂದ 89 ಕಿಲೋಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಡಂಗ್ರೋಲ್ನಲ್ಲಿ ಅವರಿಗೆ ನೆಟ್ವರ್ಕ್ ಸಮಸ್ಯೆ ಎದುರಾಗಿತ್ತು. ಲಾಕ್ಡೌನ್ ಸಮಯದಲ್ಲಿ ಐಸಿಸಿ ಆನ್ಲೈನ್ ಮೂಲಕ ಅಂಪೈರ್ಗಳಿಗೆ ವರ್ಕ್ಶಾಪ್ ಆಯೋಜಿಸಿತ್ತು. ಈ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಮೊಬೈಲ್ ಕರೆ ಮಾಡಲು ನೆಟ್ವರ್ಕ್ ಸಿಗದ ಕಾರಣ ಅವರು ಮರವೇರಿದ್ದರು.
ಅನಿಲ್ ಚೌಧರಿ ಮರವೇರಿ ಮೊಬೈಲ್ ಕರೆ ಮಾಡಿ ಚಿತ್ರ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಟೆಲಿಕಾಂ ಕಂಪನಿಯೊಂದು ಅವರನ್ನು ಸಂಪಕಿರ್ಸಿತ್ತು ಮತ್ತು ಅವರ ಊರಲ್ಲಿ ಮೊಬೈಲ್ ಟವರ್ ಅಳವಡಿಸಿತ್ತು. ಇದರಿಂದ ಅನಿಲ್ ಚೌಧರಿ ಮಾತ್ರವಲ್ಲದೆ ಆ ಊರಿನ ಎಲ್ಲರ ನೆಟ್ವರ್ಕ್ ಸಮಸ್ಯೆಯೂ ನೀಗಿತ್ತು. ಹಿಂದೆಲ್ಲ ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಡಂಗ್ರೊಲ್ನಿಂದ ದೆಹಲಿಗೆ ಸಂಚರಿಸುತ್ತಿದ್ದ ಅನಿಲ್ ಚೌಧರಿ ಈಗ ಊರಲ್ಲಿದ್ದುಕೊಂಡೇ ಆನ್ಲೈನ್ ವರ್ಕ್ಶಾಪ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾವು ಈಗ ಯಾವುದೇ ಅಡಚಣೆಗಳಿಲ್ಲದೆ ದೂರವಾಣಿಯಲ್ಲಿ ಮಾತನಾಡಬಹುದಾಗಿದೆ. ಶಿಕ್ಷಣಕ್ಕಾಗಿ ಆನ್ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವ ನಮ್ಮ ಊರಿನ ಮಕ್ಕಳಿಗೂ ಈಗ ಲಾಭವಾಗಿದೆ. ಊರಿನವರು ಈಗ ಬಂದು ನನ್ನನ್ನು ಅಭಿನಂದಿಸುವಾಗ ಅವರಿಗೆ ಇದು ಎಷ್ಟೊಂದು ದೊಡ್ಡ ಸಮಸ್ಯೆಯಾಗಿತ್ತು ಎಂಬುದು ಗೊತ್ತಾಗುತ್ತಿದೆ ಎಂದು ಅನಿಲ್ ಚೌಧರಿ ವಿವರಿಸಿದ್ದಾರೆ. 55 ವರ್ಷದ ಅವರು ಇದುವರೆಗೆ 20 ಏಕದಿನ ಮತ್ತು 27 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಐಪಿಎಲ್ ಮತ್ತು 19 ವಯೋಮಿತಿ ವಿಶ್ವಕಪ್ಗಳಲ್ಲೂ ಅಂಪೈರ್ ಆಗಿದ್ದರು.