

ನವದೆಹಲಿ: ಅಫ್ಘಾನಿಸ್ತಾನದ ಸ್ಪಿನ್ ಬೌಲಿಂಗ್ ಸೆನ್ಸೇಶನ್ ರಶೀದ್ ಖಾನ್, ವಿಶ್ವಕಪ್ ಗೆಲ್ಲದೆ ಮದುವೆಯಾಗುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ಗೆ ಒಳಗಾಗಿದ್ದಾರೆ. 21 ವರ್ಷದ ರಶೀದ್ ಖಾನ್ ಇನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಂತೆಯೇ ಮದುವೆಯಾಗದೇ ಉಳಿದುಬಿಡಬಹುದು ಎಂದು ಕ್ರಿಕೆಟ್ ಪ್ರೇಮಿಗಳು ಕಾಲೆಳೆದಿದ್ದಾರೆ.
ಐಪಿಎಲ್ ಮಾತ್ರವಲ್ಲದೆ ಆಸ್ಟ್ರೆಲಿಯಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ನಲ್ಲಿ ಟಿ20 ಲೀಗ್ಗಳಲ್ಲೂ ಆಡುವ ರಶೀದ್ ಖಾನ್ ಸಾಕಷ್ಟು ಮಹಿಳಾ ಅಭಿಮಾನಿಗಳನ್ನೂ ಹೊಂದಿದ್ದಾರೆ. ರೇಡಿಯೋ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಎದುರಾದ ಪ್ರಶ್ನೆಗೆ ಸನ್ರೈಸರ್ಸ್ ಹೈದರಾಬಾದ್ ಆಟಗಾರ ರಶೀದ್ ಖಾನ್, ಅಫ್ಘಾನಿಸ್ತಾನ ತಂಡ ವಿಶ್ವಕಪ್ ಗೆದ್ದ ಬಳಿಕವೇ ಮದುವೆಯಾಗುವುದಾಗಿ ಹೇಳಿದ್ದರು. ಇದು ನೆಟ್ಟಿಗರಿಗೆ ಆಶ್ಚರ್ಯ ತಂದಿದ್ದು, ಟ್ವಿಟರ್ನಲ್ಲಿ ಅವರ ಮದುವೆಯ ಬಗ್ಗೆ ವಿವಿಧ ರೀತಿಯಲ್ಲಿ ತಮಾಷೆ ಮಾಡಿದ್ದಾರೆ. 54 ವರ್ಷದ ಸಲ್ಮಾನ್ ಖಾನ್ ಇನ್ನೂ ಮದುವೆಯಾಗದೆ ಇರುವುದು ಭಾರತದಲ್ಲಿ ಸಾಕಷ್ಟು ಸದ್ದು ಮಾಡಿರುವಂತೆ ರಶೀದ್ ಖಾನ್ ಕೂಡ ಅಫ್ಘಾನಿಸ್ತಾದನಲ್ಲಿ ಶಾಶ್ವತವಾಗಿ ಬ್ಯಾಚುಲರ್ ಆಗಿ ಉಳಿದುಬಿಡಬಹುದು ಎಂದು ಜೋಕ್ ಮಾಡಿದ್ದಾರೆ.
ರಶೀದ್ ಖಾನ್ ಮದುವೆಯಾಗುವುದನ್ನು ಕಾಯುತ್ತ ಮುದುಕರಾಗಿಬಿಡಬಹುದು ಎಂಬ ತಿದ್ದಿದ ಚಿತ್ರವನ್ನೂ ಟ್ವಿಟರ್ನಲ್ಲಿ ಹರಿಬಿಡಲಾಗಿದೆ. ರಶೀದ್ ಖಾನ್ ಇದುವರೆಗೆ 3 ಟೆಸ್ಟ್, 68 ಏಕದಿನ ಮತ್ತು 41 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಬಳಿಕ ಅವರು ಅಫ್ಘಾನಿಸ್ತಾನ ತಂಡದ ನಾಯಕರಾಗಿಯೂ ನೇಮಕಗೊಂಡಿದ್ದಾರೆ.