

ನವದೆಹಲಿ: ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಜಟಾಪಟಿಗೆ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸುವಿಕೆ ವಿಚಾರವಾಗಿ ಪಿಸಿಬಿಯ ಈ ವರ್ತನೆಯಿಂದ ಐಸಿಸಿ ಅಚ್ಚರಿ ವ್ಯಕ್ತಪಡಿಸಿದೆ.
ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಪಿಗೆ ಆತಿಥೇಯ ಪಾಕಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಭಾಗಿಯಾಗುತ್ತಿದೆ. ಆದರೆ, ಭಾರತ ತನ್ನ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದ್ದು, ಪಾಕಿಸ್ತಾನದ ನೆಲದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಹೇಳಿದೆ. ಈ ಸಂಬಂಧ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನೀಡಿರುವ ಉತ್ತರ ಎಲ್ಲರ ಗಮನ ಸೆಳಯುತ್ತಿದೆ.
ಭಾರತದ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಟೂರ್ನಿಗೆ ಬರಬೇಕು ಅಥವಾ ಟೀಂ ಇಂಡಿಯಾ ಇಲ್ಲದೇ ಟೂರ್ನಿ ಆಯೋಜಿಸಲಾಗುತ್ತದೆಯೇ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಖ್ವಿ, ಮಂಡಳಿಯು ಈ ಬಾರಿ ಹೈಬ್ರಿಡ್ ಮಾದರಿಗೆ ಸಿದ್ಧವಾಗುವುದಿಲ್ಲ ಎಂದು ಹೇಳಿಕೊಂಡಿದೆ ಮತ್ತು ಈ ಪಂದ್ಯಾವಳಿಗೆ ತಂಡವನ್ನು ಕಳುಹಿಸಲು ಐಸಿಸಿ ಬಿಸಿಸಿಐಗೆ ಮನವರಿಕೆ ಮಾಡುತ್ತದೆ.
ಟೂರ್ನಿ ಆಯೋಜನೆ ಸಂಬಂಧ ನಾವು ಈಗಾಗಲೇ ಐಸಿಸಿಗೆ ಡ್ರಾಫ್ಟ್, ವೇಳಾಪಟ್ಟಿ ಮತ್ತು ಬಜೆಟ್ ಗಾತ್ರದ ಕುರಿತು ಪಟ್ಟಿಯನ್ನು ಸಲ್ಲಿಸುವ ಆತಿಥೇಯರಾಗಿ ನಾವು ನಮ್ಮ ಜವಾಬ್ದಾರಿಯನ್ನು ಪೂರೈಸಿದ್ದೇವೆ. ಭಾರತ ಭಾಗವಹಿಸಿವುದು ಬಿಡುವುದರ ಬಗ್ಗೆ ಐಸಿಸಿ ನಿರ್ಧರಿಸಲಿದೆ ಎಂದು ಪಿಸಿಬಿ ಅಧ್ಯಕ್ಷ ಮಹ್ಸಿನ್ ನಖ್ವಿ ಹೇಳಿದ್ದಾರೆ.
ಪಿಸಿಬಿಯ ಅಧ್ಯಕ್ಷರ ಈ ಹೇಳಿಕೆಯಿಂದ ಐಸಿಸಿ ಅಚ್ಚರಿಗೊಂಡಿದೆ. ಏಕೆಂದರೆ ಭಾರತ ಟೂರ್ನಿಯಲ್ಲಿ ಭಾಗಿಯಾಗದಿದ್ದರೆ ಐಸಿಸಿ ಹಾಗೂ ಪಿಸಿಬಿಗೆ ದೊಡ್ಡ ಮಟ್ಟದಲ್ಲಿ ನಷ್ಟವಾಗಲಿದ್ದು, ಈ ನಿಟ್ಟಿನಲ್ಲಿ ಭಾರತದ ಭಾಗವಹಿಸುವಿಕೆ ಅಗತ್ಯವಾಗಿದೆ. ಇದಲ್ಲದೆ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ಮುಂದಾಗಿದ್ದು, ಇದಕ್ಕೆ ತಗುಲುವ ಶುಲ್ಕವನ್ನು ಭರಿಸಲು ಮುಂದಾಗಿರುವುದಾಗಿ ಪಿಸಿಬಿ ಬಳಿ ಹೇಳಿದೆ. ಆದರೆ, ಇದಕ್ಕೊಪ್ಪದ ಪಿಸಿಬಿ ಭಾರತ ಇಲ್ಲದೇ ಟೂರ್ನಿ ಆಯೋಜಿಸಲು ಸಿದ್ದವಿರುವುದಾಗಿ ಹೇಳಿದೆ.
ಒಂದು ಭಾರತ ಆಡಿದರೆ ಪಾಕ್ ನೆಲದಲ್ಲಿ ಆಡಬೇಕು ಇಲ್ಲವಾದಲ್ಲಿ ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಪುರುಷರ ಏಷ್ಯಾಕಪ್ನಲ್ಲಿ ನಾವು ಯಾವುದೇ ಕಾರಣಕ್ಕೂ ಭಾಗವಹಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ತಿಕ್ಕಾಟ ಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.