ಐಸಿಸಿ ಚಾಂಪಿಯನ್ಸ್​ ಟ್ರೋಫಿ 2025: ಸಂಜು ಸ್ಯಾಮ್ಸನ್​ ನಾಯಕ, ಇಲ್ಲೂ ಕರುಣ್ ನಾಯರ್​ಗೆ ಸಿಗಲಿಲ್ಲ ಸ್ಥಾನ! Champions Trophy 2025

Champions Trophy 2025
Published on

Champions Trophy 2025 : ಇನ್ನೂ ಒಂದು ತಿಂಗಳಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಪ್ರಾರಂಭವಾಗಲಿದೆ. ಈ ಮೆಗಾ ಈವೆಂಟ್ ಪಾಕಿಸ್ತಾನ ಮತ್ತು ಯುಎಇಯಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಆತಿಥೇಯ ಪಾಕಿಸ್ತಾನ ಹೊರತುಪಡಿಸಿ ಉಳಿದೆಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳು ತಮ್ಮ ತಂಡಗಳ ವಿವರಗಳನ್ನು ಪ್ರಕಟಿಸಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ 15 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದೆ. ತಂಡದ ಆಯ್ಕೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಫಾರ್ಮ್‌ನಲ್ಲಿರುವ ಮೊಹಮ್ಮದ್ ಸಿರಾಜ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚಾ ವಿಷಯವಾಗಿದೆ. ಮತ್ತೊಂದೆಡೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಕರುಣ್ ನಾಯರ್ ಅವರನ್ನು ಈ ಮೆಗಾ ಟೂರ್ನಿಗೆ ಆಯ್ಕೆ ಮಾಡದಿರುವ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಟೀಕೆ ಮಾಡುತ್ತಿದ್ದಾರೆ.

ಇದರ ನಡುವೆ ಕ್ರೀಡಾ ಪತ್ರಕರ್ತರೊಬ್ಬರು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಆಟಗಾರರನ್ನು ಸೇರಿಸಿ ತಮ್ಮದೇಯಾದ ಅತ್ಯುತ್ತಮ ಆಡುವ ಹನ್ನೊಂದರ ಬಳಗವನ್ನು ಹೆಸರಿಸಿದ್ದಾರೆ. ಈ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಸಾಯಿ ಸುದರ್ಶನ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ರುತುರಾಜ್ ಗಾಯಕ್ವಾಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೂ ಭಾರತಕ್ಕಾಗಿ ಕೇವಲ 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ರುತುರಾಜ್ ಉತ್ತಮ ದಾಖಲೆ ಹೊಂದಿದ್ದಾರೆ.

ಮತ್ತೊಂದೆಡೆ ಸಾಯಿ ಸುದರ್ಶನ್ ಕಳೆದ ವರ್ಷ ಭಾರತಕ್ಕಾಗಿ ಏಕದಿನ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದರು. ಸುದರ್ಶನ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದರು. ಆ ಬಳಿಕ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ಪತ್ರಕರ್ತರ ತಂಡದಲ್ಲಿ ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಆದೇಶವನ್ನು ಧಿಕ್ಕರಿಸಿ ಕಿಶನ್ ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಜಾರ್ಖಂಡ್ ಮೂಲದ ಆಟಗಾರ, ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕಿಶನ್ ಅವರು ಏಕದಿನ ವಿಶ್ವಕಪ್-2023 ಗಾಗಿ ಭಾರತ ತಂಡದ ಭಾಗವಾಗಿದ್ದರು.

ಇನ್ನು ಈ ತಂಡದಲ್ಲಿ ಕಿಶನ್ ಜೊತೆಗೆ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಪತ್ರಕರ್ತರು ಸ್ಥಾನ ನೀಡಿದ್ದಾರೆ. ಸದ್ಯ ಇಬ್ಬರೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅದೇ ರೀತಿ ಫಿನಿಶರ್ ಆಗಿ ರಿಯಾನ್ ಪರಾಗ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್​ ಕೋಟಾದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ಸಿಕ್ಕಿದೆ. ಭಾರತ ಪರ ನಿತೀಶ್ ಈಗಾಗಲೇ ಟಿ20 ಮತ್ತು ಟೆಸ್ಟ್‌ನಲ್ಲಿ ತಮ್ಮ ಛಾಪು ತೋರಿಸಿದ್ದಾರೆ. ಬೌಲರ್‌ಗಳಾಗಿ ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಯುಜುವೇಂದ್ರ ಚಾಹಲ್ ಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ತಂಡದಲ್ಲೂ ಕರುಣ್ ನಾಯರ್ ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ.

ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದ ಆಟಗಾರರನ್ನೊಳಗೊಂಡ ಬೆಸ್ಟ್ ಪ್ಲೇಯಿಂಗ್ XI

ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ನಾಯಕ), ತಿಲಕ್ ವರ್ಮಾ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್

ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ ಭಾರತ ತಂಡ

ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್​ ಪಂತ್ ಮತ್ತು ರವೀಂದ್ರ ಜಡೇಜಾ.

ಮೀಸಲು ಆಟಗಾರರು: ವರುಣ್ ಚಕ್ರವರ್ತಿ, ಅವೇಶ್ ಖಾನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net