

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ, ನೂತನ ಹೆಡ್ ಕೋಚ್ ಆಗಿರುವ ಗೌತಮ್ ಗಂಭೀರ್ ಮತ್ತು ದಾಖಲೆಗಳ ಸರದಾರ, ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮಧ್ಯೆ ನಡೆದಿದ್ದ ಜಟಾಪಟಿ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿಯೇ. ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು ಒಬ್ಬರ ಎದುರಿಗೆ ಮತ್ತೊಬ್ಬರು ಮುಖಾಮುಖಿಯಾಗಿ ಬಂದರೆ ಸಾಕು ಅಲ್ಲಿ ಮಾತಿನ ಚಕಮಕಿ ಜೋರಾಗಿಯೇ ಇರುತ್ತಿತ್ತು. ಇವರಿಬ್ಬರ ವಾಗ್ವಾದಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದು, ವಿಡಿಯೋ ತುಣುಕುಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತವೆ.
ಆದ್ರೆ ಕಳೆದ ಮಾರ್ಚ್ 29ರಂದು ಬೆಂಗಳೂರಿನಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯಲ್ಲಿ ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಎದುರಾಗಿತ್ತು. ಕಾರಣ, ಒಬ್ಬರನೊಬ್ಬರು ಕಂಡರೆ ಹಾವು-ಮುಂಗುಸಿಯಂತೆ ಇರುತ್ತಿದ್ದ ಇವರಿಬ್ಬರು ಅಂದು ಈ ಮ್ಯಾಚ್ನಲ್ಲಿ ಆರ್ಸಿಬಿ ಇನಿಂಗ್ಸ್ನ 16ನೇ ಓವರ್ ಬಳಿಕ ನೀಡಿದ ಟೈಮ್ಔಟ್ ವೇಳೆ ಕ್ರೀಡಾಂಗಣಕ್ಕೆ ಆಗಮಿಸಿದ ಗಂಭೀರ್, ನಗುನಗುತ್ತಲೆ ವಿರಾಟ್ರನ್ನು ಅಪ್ಪಿಕೊಂಡು, ತಮ್ಮಿಬ್ಬರ ಮಧ್ಯೆ ಯಾವ ಮನಸ್ತಾಪವು ಉಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದರು.
ಸದ್ಯ ಇದೆಲ್ಲವೂ ಅಂತ್ಯಗೊಂಡಿದ್ದು, ಗಂಭೀರ್ ಮತ್ತು ಕೊಹ್ಲಿ ನಡುವೆ ಯಾವುದೇ ಮನಸ್ತಾಪ, ವೈಮನಸ್ಸು ಇಲ್ಲ ಎಂದೇ ಕೆಲವರು ಭಾವಿಸಿದರೆ, ಇನ್ನೂ ಕೆಲವರು ನಾವು ಅಂದುಕೊಂಡಿರುವುದು ತಪ್ಪು. ಈಗಲೂ ಸಹ ಅವರಿಬ್ಬರು ಪರಸ್ಪರ ಮುಖಾಮುಖಿಯಾಗಿ ಮಾತನಾಡುವುದಿಲ್ಲ ಎಂದು ಅಂದುಕೊಂಡಿದ್ದಾರೆ. ಇದೆಲ್ಲದರ ನಡುವೆ ಇತ್ತೀಚಿನ ವರದಿಯೊಂದು, ತಮ್ಮ ಮತ್ತು ಗಂಭೀರ್ ಮಧ್ಯೆಯಿದ್ದ ವಿವಾದಗಳಿಗೆ ಸಂಬಂಧಿಸಿದಂತೆ ವಿರಾಟ್ ಬಿಸಿಸಿಐ ಜತೆ ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.
ಟೀಮ್ ಇಂಡಿಯಾದ ಕೋಚ್ ಆದ ಬಳಿಕ ಗೌತಮ್ ಗಂಭೀರ್ ಅವರಿಗೆ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಿವೆ. ಭಾರತ ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಗೌತಮ್, ಟೀಮ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಹಳೆಯದನ್ನು ಮರೆತು ಮುಂದುವರಿಯಲು ನಾನು ಸಿದ್ಧ ಎಂದು ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).