

ನವದೆಹಲಿ: ಇದುವರೆಗೂ ಕೇಳಿಬರುತ್ತಿದ್ದ ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಡಿವೋರ್ಸ್ ವದಂತಿ ಇದೀಗ ನಿಜವಾಗಿದೆ. ನಿನ್ನೆ (ಜುಲೈ 18) ರಾತ್ರಿ ವಿಚ್ಛೇದನದ ಬಗ್ಗೆ ಹಾರ್ದಿಕ್ ಪಾಂಡ್ಯ ಸ್ಪಷ್ಟನೆ ನೀಡಿದ್ದು, ಪತ್ನಿ ನತಾಶಾ ಸ್ಟಾಂಕೋವಿಕ್ ಜತೆ ದಾಂಪತ್ಯ ಜೀವನ ಮುರಿದುಬಿದ್ದಿರುವುದಾಗಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ನಾಲ್ಕು ವರ್ಷಗಳ ಜೊತೆ ಪಯಣ ಇಂದು ಅಂತ್ಯಗೊಂಡಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಬಿರುಕು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗದಿದ್ದಾಗ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುತ್ತಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಮತ್ತು ಜನರಿಗೆ ಮನವಿ ಮಾಡಿದ್ದಾರೆ.
ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹಾರ್ದಿಕ್ ಮನವಿ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಪತ್ನಿ ನತಾಶಾ ಅವರು ಸಾಕಷ್ಟು ನಗದು ಮತ್ತು ಆಸ್ತಿಯನ್ನು ಜೀವನಾಂಶವಾಗಿ ಪಡೆದಿದ್ದಾರೆ ಎಂಬ ಗುಸುಗುಸು ಎಬ್ಬಿದೆ. ಆದರೆ, ಒಟ್ಟು ಮೊತ್ತ ಎಷ್ಟು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಬಗ್ಗೆ ಪಾಂಡ್ಯ ಅಥವಾ ನತಾಶಾ ಆಗಲಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇವರಿಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿರುವಾಗಲೇ ಜೀವನಾಂಶದ ಸುದ್ದಿಯೊಂದು ವೈರಲ್ ಆಗಿತ್ತು. ಕ್ರಿಕೆಟಿಗನಾಗಿ ಮತ್ತು ಅನೇಕ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಸಾಕಷ್ಟು ಸಂಪಾದಿಸಿರುವ ಪಾಂಡ್ಯರಿಂದ ನತಾಶಾ 70 ರಷ್ಟು ಆಸ್ತಿಯನ್ನು ಜೀವನಾಂಶವಾಗಿ ಪಡೆದಿದ್ದಾರೆ ಎಂದು ವರದಿಗಳು ಬಂದವು.
ಕೆಲ ವಾರಗಳ ಹಿಂದೆ ಹಾರ್ದಿಕ್ ಪಾಂಡ್ಯ ತನ್ನ ಸಂಪೂರ್ಣ ಆಸ್ತಿಯಲ್ಲಿ ಶೇ.70ರಷ್ಟು ಆಸ್ತಿಯನ್ನು ನತಾಶಾ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಆದರೆ, ವಿಚ್ಛೇದನದ ಅಧಿಕೃತ ಘೋಷಣೆ ತಡವಾಗಿತ್ತು. ಒಟ್ಟು ಆಸ್ತಿಯಲ್ಲಿ 70 ಪ್ರತಿಶತದಷ್ಟು ಆಸ್ತಿ ತುಂಬಾ ಹೆಚ್ಚಾಯಿತು. ಇದರಿಂದ ಪಾಂಡ್ಯ ಬೀದಿಯಲ್ಲಿ ಬಿದ್ದಿದ್ದಾರೆ ಎಂದು ಕೆಲವರು ಪಾಂಡ್ಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪಾಂಡ್ಯ ತಾನು ಸಂಪಾದಿಸಿದ ಆಸ್ತಿಯನ್ನೆಲ್ಲ ತಾಯಿಯ ಹೆಸರಿನಲ್ಲಿ ಇಟ್ಟುಕೊಂಡಿದ್ದಾನೆ ಎಂಬ ಸುದ್ದಿ ಬಂದಿತು. ತಾಯಿಯ ಹೆಸರಿಗೆ ಆಸ್ತಿ ಬರೆದಿರುವ ಹಿನ್ನೆಲೆ ಕೇವಲ ಒಂದು ಸಣ್ಣ ಮೊತ್ತವು ಮಾತ್ರ ನತಾಶಾಗೆ ಹೋಗುತ್ತದೆ ಎನ್ನಲಾಗಿತ್ತು. ಆದರೆ, ಇದೆಲ್ಲ ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ. ಆದಾಗ್ಯೂ, ಪರಸ್ಪರ ಒಪ್ಪಿಗೆಯಿಂದ ಇಬ್ಬರು ಪ್ರತ್ಯೇಕಗೊಂಡರೆ ಯಾವುದೇ ಜೀವನಾಂಶವನ್ನು ಪಾವತಿಸುವ ಅಗತ್ಯವಿಲ್ಲ ಎಂದು ಕೆಲವು ಕಾನೂನು ತಜ್ಞರು ಹೇಳುತ್ತಾರೆ. (ಏಜೆನ್ಸೀಸ್)