

ಮುಂಬೈ: ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗೆ ಇಂದು ತೆರೆ ಬಿದ್ದಿದೆ.
ನಾವಿಬ್ಬರು ಪರಸ್ಪರ ಬೇರೆ ಬೇರೆಯಾಗಿರುವುದಾಗಿ ಸ್ವತಃ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೇ ಖಚಿತಪಡಿಸಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿಯನ್ನು ಅಧಿಕೃತಗೊಳಿಸಿದ್ದಾರೆ. ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ʼನಲ್ಲಿ ಏನಿದೆ?: ಹಾರ್ದಿಕ್ ಮತ್ತು ನತಾಶಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿ, ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ನಾಲ್ಕು ವರ್ಷಗಳ ಜೊತೆ ಪಯಣ ಇಂದು ಅಂತ್ಯಗೊಂಡಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಬಿರುಕು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗದಿದ್ದಾಗ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುತ್ತಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಮತ್ತು ಜನರಿಗೆ ಮನವಿ ಮಾಡಿದ್ದಾರೆ.
ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
4 ವರ್ಷಗಳ ಹಿಂದೆ ವಿವಾಹ: ಪಾಂಡ್ಯ ಮತ್ತು ಸ್ಟಾಂಕೋವಿಕ್ ಮೇ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಕೋರ್ಟ್ ಮದುವೆ ಮಾಡಿಕೊಂಡಿದ್ದರು. ಅದೇ ವರ್ಷ ಅಂದರೆ ಜುಲೈ 2020 ರಲ್ಲಿ ಈ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. ಆ ಬಳಿಕ ಮಗನ ಎದುರಿಗೆ ಈ ಇಬ್ಬರು 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಈ ದಂಪತಿಗಳು ತಮ್ಮ 4 ವರ್ಷದ ಜೊತೆ ಪಯಣಕ್ಕೆ ಅಂತ್ಯ ಹಾಡಿದ್ದಾರೆ.