

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕ್ರಿಕೆಟ್ನಿಂದ ಸಂಪೂರ್ಣ ದೂರವಾಗಿದ್ದ ಕ್ರಿಕೆಟಿಗರು ಇದೀಗ, ಯುಎಇಯಲ್ಲಿ ಐಪಿಎಲ್ ಟೂರ್ನಿ ಆಡುವುದಕ್ಕೆ ಪೂರ್ವಭಾವಿಯಾಗಿ ಅಭ್ಯಾಸಕ್ಕೆ ಮರಳುತ್ತಿದ್ದಾರೆ. ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲು ಸಜ್ಜಾಗುತ್ತಿರುವ ಕನ್ನಡಿಗ ಕೆಎಲ್ ರಾಹುಲ್, ಮರಳಿ ಕ್ರಿಕೆಟ್ ಮೈದಾನಕ್ಕಿಳಿದ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಜತೆಗೆ ಲಾಕ್ಡೌನ್ ಸಮಯದಲ್ಲಿ ತಮಗೆ ಕ್ರಿಕೆಟ್ ಆಟವೇ ಮರೆತುಹೋಗುತ್ತದೆ ಎಂದು ಭಯಪಟ್ಟ ಬಗ್ಗೆ ಹೇಳಿಕೊಂಡಿದ್ದಾರೆ.
'ಲಾಕ್ಡೌನ್ ವೇಳೆ ನಾನು ಸಾಕಷ್ಟು ಹೆದರಿದ್ದೆ. ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿದಾಗ ನನ್ನ ಕ್ರಿಕೆಟ್ ಕೌಶಲ ಹಾಗೆಯೇ ಇರಬಹುದೇ ಎಂದು ಆತಂಕಪಟ್ಟಿದ್ದೆ. ನಾನು ದುಃಸ್ವಪ್ನಗಳನ್ನು ಕಂಡಿದ್ದೆ. ಕೆಲವೊಮ್ಮೆ ಮಧ್ಯರಾತ್ರಿಯ ವೇಳೆ ಎದ್ದುಕುಳಿತಿದ್ದೆ. ಯಾಕೆಂದರೆ ಮೈದಾನಕ್ಕಿಳಿದು ಲೈನ್ ಮತ್ತು ಲೆಂತ್ ಎಸೆತಗಳನ್ನು ಎದುರಿಸುವುದೇ ಮರೆತುಹೋದಂತೆ ಕನಸು ಬೀಳುತ್ತಿತ್ತು. ಅದು ನನಗೆ ಭಯ ಹುಟ್ಟಿಸಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಭ್ಯಾಸಕ್ಕೆ ಮರಳಿದ ಮೊದಲ ದಿನ ಸಾಕಷ್ಟು ಪರದಾಡಬೇಕಾಯಿತು. ಯಾಕೆಂದರೆ ದೇಹ ಸಾಕಷ್ಟು ಜಡವಾಗಿತ್ತು' ಎಂದು ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
'5 ತಿಂಗಳ ಕಾಲ ಟ್ರೆಡ್ಮಿಲ್ನಲ್ಲಷ್ಟೇ ದೇಹಕ್ಕೆ ವ್ಯಾಯಾಮ ಸಿಗುತ್ತಿತ್ತು. ಮತ್ತೆ ಮೈದಾನಕ್ಕೆ ಇಳಿದಾಗ ಮೋಡದ ನಡುವೆ ನಡೆಯುವಂತಾಗಿತ್ತು. ಆ ಅನುಭವವನ್ನು ವಿವರಿಸುವುದು ಕಷ್ಟ. ಕಣ್ಣುಗಳು ತುಂಬಿದ್ದವು. ಮುಖದಲ್ಲಿ ನಗು ಮೂಡುತ್ತಿತ್ತು. ಮತ್ತೆ ಮೈದಾನಕ್ಕಿಳಿದು ಓಡುವುದು ಸಾಕಷ್ಟು ಉತ್ತಮವೆನಿಸುತ್ತಿತ್ತು' ಎಂದು ರಾಹುಲ್ ವಿವರಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಕ್ರೀಡಾಪಟುಗಳು ಮನೆಯಲ್ಲೇ ಬಂಧಿಯಾಗಿದ್ದರು. ಈ ವೇಳೆ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಸಾಕಷ್ಟು ಪಾಠಗಳನ್ನು ಕಲಿತುಕೊಂಡೆ ಎಂದು 28 ವರ್ಷದ ರಾಹುಲ್ ಹೇಳಿದ್ದಾರೆ. 'ಸಾಕಷ್ಟು ವಿಷಯಗಳಿಗೆ ನಾವು ಋಣಿಯಾಗಿರಬೇಕು ಎಂಬುದನ್ನು ತಿಳಿದುಕೊಂಡೆ. ಹೆಚ್ಚಿನ ತಾಳ್ಮೆಯನ್ನೂ ಕಲಿತುಕೊಂಡಿದ್ದೇನೆ. ಕುಟುಂಬದ ಜತೆಗೆ ಹೆಚ್ಚಿನ ಸಮಯವನ್ನೂ ಕಳೆದೆ. ಜೂನಿಯರ್ ಕ್ರಿಕೆಟ್ ಪ್ರವೇಶಿಸಿದ ದಿನಗಳಿಂದಲೂ ಇಷ್ಟೊಂದು ಬಿಡುವಿನ ಸಮಯ ನನಗೆ ದೊರೆತಿರಲಿಲ್ಲ. ಇದೇ ವೇಳೆ ಕೆಲ ಜನರಿಗೆ ನೆರವು ಒದಗಿಸುವ ಅವಕಾಶವೂ ನನಗೆ ಲಭಿಸಿತು. ನಾನು ಅಡುಗೆ ಮಾಡುವುದನ್ನೂ ಕಲಿತುಕೊಂಡೆ' ಎಂದು ರಾಹುಲ್ ಹೇಳಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗರೇ ಆದ ತಂಡದ ಕೋಚ್ ಅನಿಲ್ ಕುಂಬ್ಳೆ ಅವರೊಂದಿಗೆ ಕಾರ್ಯನಿರ್ವಹಿಸುವುದನ್ನು ಎದುರುನೋಡುತ್ತಿದ್ದೇನೆ ಎಂದಿರುವ ರಾಹುಲ್, ಅವರು ಜೂನಿಯರ್ ದಿನಗಳಿಂದಲೂ ನನ್ನನ್ನು ನೋಡಿದ್ದಾರೆ. ಅವರು ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಅವರ ಅನುಭವ ನನ್ನ ನಾಯಕತ್ವಕ್ಕೆ ಸಾಕಷ್ಟು ನೆರವಾಗಲಿದೆ ಎಂದು ಹೇಳಿದ್ದಾರೆ.